ಜಿಲ್ಲೆ

ಕೇಣಿ ವಾಣಿಜ್ಯ ಬಂದರು ನಿರ್ಮಾಣ ಕೈಬಿಡಲು ಮನವಿ

ಅಂಕೋಲಾ: ತಾಲೂಕಿನ ಪ್ರಸ್ತಾವಿತ ಕೇಣಿ ವಾಣಿಜ್ಯ ಬಂದರು ನಿರ್ವಣವಾಗುವುದರಿಂದ ಉಂಟಾಗುವ ದುಷ್ಪರಿಣಾಮ ಮತ್ತು ಮುನ್ನೆಚ್ಚರಿಕೆ ಕಾರಣಗಳಿಂದ ನಿರ್ಮಾಣ ಯೋಜನೆ ಕೈಬಿಡುವ ಕುರಿತು ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯವರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ತಿಳಿಸಿದಂತೆ ಪ್ರಸ್ತಾವಿತ ಬಂದರು ನಿರ್ಮಾಣ ಪ್ರದೇಶದಲ್ಲಿ ಆಲೀವ ರಿಡ್ಲೆ ಕಡಲಮೆಗಳು ಮೊಟ್ಟೆಯನ್ನು ಇಟ್ಟು ಸಂತಾನೋತ್ಪತ್ತಿಯಲ್ಲಿ ತೊಡಗಿರುವುದರಿಂದ ಹಾಗೂ ಅವುಗಳ ಸಹಜ ಬೆಳವಣಿಗೆ ಕ್ರಮಗಳಂತೆ ಇಲ್ಲಿ ಜನಿಸಿದ ಮರಿಗಳು ಬೆಳವಣಿಗೆ ಹೊಂದಿ ಮತ್ತೆ ಇದೇ ಪ್ರದೇಶದಲ್ಲಿ ಮೊಟ್ಟೆ ಇಡಲು ಬರುವುದರಿಂದ ಅವುಗಳ ನೈಸರ್ಗಿಕ ಸಂತಾನೋತ್ಪತ್ತಿ ಸ್ಥಳದಲ್ಲಿ ಅತಿಕ್ರಮಣ ಮಾಡಿದಂತಾಗುತ್ತದೆ. ಸಿಆರ್​ಜೆಡ್ ಅಧಿಸೂಚನೆ 2011 ಮತ್ತು 2019ರ ಅನ್ವಯ ಸಿಆರ್​ಜೆಡ್ ವ್ಯಾಪ್ತಿ ಬರುವುದರಿಂದ ಬಡ ಮೀನುಗಾರರ ಭೂಮಿಯನ್ನು ಬೃಹತ್ ಕಂಪನಿಗಳಿಗೆ ಮಾರಾಟ ಮಾಡಲು ಹುನ್ನಾರ ನಡೆದಿದೆ. ಹೀಗೆ 18 ಅಂಶಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಎನ್​ಎಫ್​ಎಫ್ ಮುಖಂಡರಾದ ವಿಕಾಸ ತಾಂಡೇಲ, ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ವೆಂಕಟೇಶ ತಾಂಡೇಲ, ನಿರ್ದೇಶಕರಾದ ರಾಜು ಹರಿಕಂತ್ರ ಕಣಗಿಲ, ಶ್ರೀಧರ ಹರಿಕಂತ್ರ, ಚಂದ್ರಕಾಂತ ಕೋಚ್ರೆಕರ, ಸುಧಾಕರ ಹರಿಕಂತ್ರ, ದಿಲೀಪ ಚಂಡೇಕರ್, ಕೇಣಿ ಬಂದರು ಹೋರಾಟ ಸಮಿತಿ ಅಧ್ಯಕ್ಷ ಶ್ರೀಕಾಂತ ಡಿ. ದುರ್ಗೆಕರ್, ಕಾರ್ಯದರ್ಶಿ ಸಂಜು ಬಲೇಗಾರ, ಹೂವ ಖಂಡೇಕರ್, ರಾಜೇಶ ತಾಂಡೇಲ್, ರಾಜು ತಾಂಡೇಲ್, ಅರವಿಂದ ಕುಡ್ತಾಳಕರ, ಇತರರು ಉಪಸ್ಥಿತರಿದ್ದರು.