ಸಿಂಧನೂರು: ಸರ್ಕಾರದಿಂದ ಹಂಪಿ, ಆನೆಗುಂದಿ, ಕನಕಗಿರಿ ಉತ್ಸವದ ಮಾದರಿಯಲ್ಲಿ ತಾಲೂಕಿನ ಅಂಬಾಮಠದ ಸಿದ್ದಪರ್ವತವಾಸಿ ಅಂಬಾದೇವಿ ಉತ್ಸವ ಮಾಡಬೇಕೆಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ತಹಸಿಲ್ ಕಚೇರಿ ಶಿರಸ್ತೇದಾರ್ ಚಂದ್ರಶೇಖರ್‌ಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಶಕ್ತಿ ದೇವತೆಯಾದ ಬಗಳಾಮುಖಿ ಅಂಬಾದೇವಿ ಜಾತ್ರೆಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ-ತೆಲಂಗಾಣ ರಾಜ್ಯಗಳಿಂದ ಆಗಮಿಸುತ್ತಿದ್ದು, ದೇಣಿಗೆ ರೂಪದ ಕಾಣಿಕೆಯ ಕೋಟ್ಯಂರ ರೂ. ಸರ್ಕಾರದ ಬೊಕ್ಕಸ ಸೇರುತ್ತಿದೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ.
ಇದುವರೆಗೆ ಅಧಿಕಾರ ನಡೆಸಿದ ರಾಜಕೀಯ ಧುರೀಣರು, ಅಧಿಕಾರಿಗಳು, ಅಂಬಾದೇವಿ ಉತ್ಸವ ಮಾಡಲು ಮನಸ್ಸು ಮಾಡದಿರುವುದು ಬೇಸರದ ಸಂಗತಿ. ಈ ಬಗ್ಗೆ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ಅಂಬಾದೇವಿ ಉತ್ಸವ ಮಾಡಲು ಶಿಫಾರಸು ಮಾಡಬೇಕೆಂದು ಮನವಿಯಲ್ಲಿ ಕಲಾವಿದರು ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾ ಗೌರವ ಅಧ್ಯಕ್ಷ ನಾರಾಯಣಪ್ಪ ಮಾಡಸಿರವಾರ, ತಾಲೂಕು ಅಧ್ಯಕ್ಷ ಹನುಮಂತ ಭಜಂತ್ರಿ, ಮಸ್ಕಿ ತಾಲೂಕು ಅಧ್ಯಕ್ಷ ಮಲ್ಲಪ್ಪ ಪೂಜಾರ, ಕೇಂದ್ರ ಸಮಿತಿ ಕಾರ್ಯದರ್ಶಿ ಅಮರೇಶ ಹಸಮಕಲ್, ನಿರುಪಾದಿ, ಜಯಮ್ಮ, ಹುಲುಗಮ್ಮ, ದುರುಗಮ್ಮ, ಶೇಖಪ್ಪ, ಶಿವಪ್ಪ ನಾಯಕ, ಅಯ್ಯಪ್ಪ, ಯಲ್ಲಮ್ಮ ಶರಣಮ್ಮ, ಸುವರ್ಣಾ, ಸಂಪ್ರದಾಯ ಮತ್ತು ಶೋಭಾನೆ ಪದಗಳ ಕಲಾ ತಂಡದವರು ಇದ್ದರು.