ನರಗುಂದ: ತಾಲೂಕಿನ ಬೆಳೆ ಸಮೀಕ್ಷೆಗಾರರಿಗೆ (ಖಾಸಗಿ ಪಿ.ಆರ್) ಸೇವಾ ಭದ್ರತೆ, ಜೀವವಿಮೆ ಮುಂತಾದ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಶಿವಾನಂದ ಮಾಳಪ್ಪನವರ ಮಾತನಾಡಿ, ತಾಲೂಕಿನಲ್ಲಿ 7-8 ವರ್ಷಗಳಿಂದ ಬೆಳೆ ಸಮೀಕ್ಷೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಖಾಸಗಿ ಪಿ.ಆರ್. ಸಿಬ್ಬಂದಿಗಳಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳಿಲ್ಲದೆ ಕಷ್ಟಕರ ಜೀವನ ನಡೆಸುವಂತಾಗಿದೆ. ದಿನಗೂಲಿ ಕೆಲಸ ಮಾಡುತ್ತಿರುವ ಸಮೀಕ್ಷೆಗಾರರಿಗೆ ಸರ್ಕಾರದಿಂದ ಗುರುತಿನ ಚೀಟಿ, ರೆನ್ ಕೋಟ್, ಪವರ್ ಬ್ಯಾಂಕ್, ಫಾರೆಸ್ಟ್ ಶೂ, 10 ಲಕ್ಷ ರೂಪಾಯಿ ಜೀವವಿಮೆ ನೀಡಬೇಕು. ವರ್ಷದಲ್ಲಿ ಮೂರು ಬಾರಿ ಕೆಲಸ ನೀಡುವುದರ ಬದಲು ಎಲ್ಲರನ್ನು ಕಾಯಂಗೊಳಿಸಬೇಕು. ಪ್ರತಿ ತಿಂಗಳು 8 ಸಾವಿರದಿಂದ 15 ಸಾವಿರ ಗೌರವಧನ ನೀಡಬೇಕು. ಪ್ರತಿ ಸರ್ವೇ ನಂಬರಿನ ಪ್ರತಿಯೊಂದು ಹಿಸ್ಸಾಕ್ಕೆ 25 ರೂ. ಹಣ ಪಾವತಿಸುವಂತೆ ಆಗ್ರಹಿಸಿದರು.
ಈಶ್ವರ ಭೋಸಲೆ, ವಿನಾಯಕ ಪವಾರ, ಮುತ್ತು ಹಳಕಟ್ಟಿ, ಮಹದೇವ ಕುಂಬಾರ, ಸಂತೋಷ ಕುರ್ಲಗೇರಿ, ಪ್ರಭು ಹಂಪನ್ನವರ, ಹುಸೇನಸಾಬ ಅಗಸರ, ದ್ಯಾಮಣ್ಣ ತಿಗಡಿ, ಮಲ್ಲನಗೌಡ್ರ ಪರಣ್ಣವರ, ಕಡಿಯಪ್ಪ ಬಾರಕೇರ, ಅರ್ಜುನ ಯಾದವ, ಬಸವರಾಜ ತರುಮಲ್ಲಿಮಠ ಉಪಸ್ಥಿತರಿದ್ದರು.