ಜಿಲ್ಲೆ

ಬಾಕಿ ಅನುದಾನಕ್ಕೆ ಸಿಎಂಗೆ ಮಹಾಪೌರರಿಂದ ಮನವಿ

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಕಿ ಅನುದಾನ ಬಿಡುಗಡೆ, ಅಭಿವೃದ್ಧಿಪರ ಕಡತಗಳಿಗೆ ಅನುಮೋದನೆ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾಪೌರ ರಾಮಪ್ಪ ಬಡಿಗೇರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರದಂದು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮನವಿ ಪತ್ರ ಸಲ್ಲಿಸಿದರು.

ಬಿಬಿಎಂಪಿ ಮಾದರಿಯಲ್ಲಿ ಹು-ಧಾ ಮಹಾನಗರ ಪಾಲಿಕೆಗೂ ಆಸ್ತಿಕರ ಒಂದು ಸಾರಿ ಹೊಂದಾಣಿಕೆಗೆ (ಒಟಿಎಸ್) ಕರದಾರರಿಗೆ ಅವಕಾಶ ಮಾಡಿಕೊಡಬೇಕು. ನೀರಿನ ಕರ ಬಾಕಿ ವಸೂಲಾತಿಗೆ ಮತ್ತೊಂದು ಬಾರಿ ಒಟಿಎಸ್​ಗೆ ಅನುಮತಿ ನೀಡಬೇಕು. ಪಾಲಿಕೆ ನಿವೃತ್ತ ನೌಕರರ 58 ಕೋಟಿ ರೂ. ಪಿಂಚಣಿ ಹಣ ಬಾಕಿ ಇದ್ದು, ಶೀಘ್ರ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಪಾಲಿಕೆ ಚುನಾಯಿತರ ಸಂಖ್ಯೆ ಏರಿದೆ. ಹೀಗಾಗಿ, ನೂತನ ಸಭಾಬವನ ಕಟ್ಟಡ ನಿರ್ವಣಕ್ಕೆ 30 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದು, ಅನುದಾನ ಬಿಡುಗಡೆಗೊಳಿಸಬೇಕು. ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ಬಿಡುಗಡೆಯಾದ ಹಣದಲ್ಲಿ ಇನ್ನೂ 48 ಕೋಟಿ ರೂ. ಅನುದಾನ ಸರ್ಕಾರದಿಂದ ಬಿಡುಗಡೆಯಾಗಬೇಕಿದೆ. ಪಾಲಿಕೆ ಸದಸ್ಯರ ಗೌರವ ಧನ ಹೆಚ್ಚಳಕ್ಕೆ ಠರಾವು ಮಾಡಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಪಾಲಿಕೆಯಲ್ಲಿ 2,745 ಲೀಸ್ ಆಸ್ತಿಗಳು ಇದ್ದು, ಭೂ ಬಾಡಿಗೆ ಮುಂದುವರಿಸುವ ಅಥವಾ ಮಾರುವುದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ನಿರ್ಣಯ ಸರ್ಕಾರದ ಮಟ್ಟದಲ್ಲಿ ಬಾಕಿ ಇರುವುದರಿಂದ ಪಾಲಿಕೆ ಆದಾಯ ಕುಂಠಿತಗೊಂಡಿದೆ. ಶೀಘ್ರ ಸಮರ್ಪಕ ನಿರ್ಧಾರ ಪ್ರಕಟಿಸುವಂತೆ ಆಗ್ರಹಿಸಿದರು.

ಸರ್ಕಾರದಿಂದ ಬಿಡುಗಡೆಗೊಂಡಿರುವ 1, 2 ಮತ್ತು 3ನೇ ಹಂತದ 100 ಕೋಟಿ ರೂ. ಅನುದಾನದಲ್ಲಿ ಇನ್ನೂ 54 ಕೋಟಿ ರೂ. ಬಿಡುಗಡೆಯಾಗಿಲ್ಲ. ಬಾಕಿ ಹಣ ಶೀಘ್ರ ಬಿಡುಗಡೆಗೊಳಿಸಬೇಕು. ಘನತ್ಯಾಜ್ಯ ನಿರ್ವಹಣೆಗೆ ಪೌರ ಕಾರ್ವಿುಕರ ಕೊರತೆ ಇದ್ದು, 799 ಪೌರ ಕಾರ್ವಿುಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೇಗ ಕಡತ ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದರು.

ಉಪ ಮಹಾಪೌರರಾದ ದುರ್ಗಮ್ಮ ಬಿಜವಾಡ ಈ ಸಂದರ್ಭದಲ್ಲಿ ಹಾಜರಿದ್ದರು.