ಚನ್ನಪಟ್ಟಣ
ನಗರದ ಶೆಟ್ಟಿಹಳ್ಳಿ ಕೆರೆ ಪುನರುಜ್ಜೀವನ ಕಾಮಗಾರಿ ಬಿರುಸಿನಿಂದ ಸಾಗುತ್ತಿದ್ದು, ಇದರ ಮಧ್ಯೆ ಕೆರೆಯ ಬಫರ್ ವಲಯವನ್ನು ಗುರುತಿಸಿ, ಒತ್ತುವರಿ ತೆರವಿಗೆ ಆಗ್ರಹ ಕೇಳಿಬಂದಿದೆ.
ನಗರದ ಶೆಟ್ಟಿಹಳ್ಳಿ ಕೆರೆ ಸಾಕಷ್ಟು ಮಲೀನವಾಗುವ ಜತೆಗೆ ಒತ್ತುವರಿದಾರರ ಕಪಿಮುಷ್ಟಿಗೆ ಸಿಲುಕಿ ಅವಸಾನದ ಅಂಚಿಗೆ ತಲುಪಿತ್ತು. ಈ ಬಗ್ಗೆ ಹೋರಾಟಗಳು ಹಾಗೂ ಮಾಧ್ಯಮಗಳ ನಿರಂತರ ವರದಿ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ಸಹ ನಡೆಸಿದರು.
ಇದರಿಂದಾಗಿ ಕೆರೆಯ ಸುಧಾರಣೆಗೆ ಸಂಬಂಧಿಸಿದವರು ಗಮನಹರಿಸಿ, ಕೆರೆ ಪುನರುಜ್ಜೀವನ ಕಾಮಗಾರಿಗೆ ಚಾಲನೆ ನೀಡಿದರು. ಲೇಕ್ ಮ್ಯಾನ್ ಆಫ್ ಇಂಡಿಯಾ ಎಂದೇ ಹೆಸರಾಗಿರುವ ಡಾ.ಆನಂದ್ ಮಲ್ಲಿಗವಾಡ ನೇತೃತ್ವದಲ್ಲಿ ಕಾಮಗಾರಿ ಭರದಿಂದ ಸಾಗಿದೆ. ಆದರೆ, ಒತ್ತುವರಿ ತೆರವಿನ ಬಗ್ಗೆ ಸಂಬಂಧಿಸಿದವರು ಗಮನಹರಿಸುತ್ತಿಲ್ಲ ಎಂಬ ಆರೋಪವಿದ್ದು, ಸಾಮಾಜಿಕ ಕಾರ್ಯಕರ್ತರಾದ ಗಜೇಂದ್ರ ಸಿಂಗ್ ಹಾಗೂ ಸುರೇಶ್ ಎಂಬುವವರು ಮತ್ತೊಮ್ಮೆ ಉಪಲೋಕಾಯುಕ್ತರ ಮೊರೆ ಹೋಗಿದ್ದಾರೆ.
ಶೆಟ್ಟಿಹಳ್ಳಿ ಕೆರೆ ಪರಿಶೀಲನೆ ವೇಳೆ ಕೆರೆಯ ಬಫರ್ ವಲಯವನ್ನು ಗುರುತಿಸಿ, ಒತ್ತುವರಿಯನ್ನು ತೆರವುಗೊಳಿಸಿ, ಸುತ್ತಲೂ ಬೇಲಿ ನಿರ್ಮಿಸುವಂತೆ ಉಪಲೋಕಾಯುಕ್ತರು ಸೂಚನೆ ನೀಡಿದ್ದರು. ಆದರೆ, ಈವರೆಗೂ ಕೆರೆಯ ಬಫರ್ ವಲಯ ಗುರುತಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಕೆರೆ ಅಂಗಳ ಮತ್ತು ಬಫರ್ ವಲಯವನ್ನು ಗುರುತಿಸಿ ಒತ್ತುವರಿ ತೆರವುಗೊಳಿಸದೇ, ಕೆರೆಯನ್ನು ಯಥಾಸ್ಥಿತಿ ಇರುವಂತೆ ಸ್ವಚ್ಛತೆ ಮಾಡಿ ಅಭಿವೃದ್ಧಿಪಡಿಸುವ ಮೂಲಕ ಅನಧಿಕೃತ ಒತ್ತುವರಿ ಅಧಿಕೃತಗೊಳಿಸುವ ಹುನ್ನಾರ ನಡೆಯುತ್ತಿದೆ ಎಂಬುದು ಸಾಮಾಜಿಕ ಕಾರ್ಯಕರ್ತರ ಆರೋಪವಾಗಿದೆ.
ಈ ಸಂಬಂಧ ದಾಖಲೆಗಳ ಸಮೇತ ಉಪಲೋಕಾಯುಕ್ತರ ಕಚೇರಿಗೆ ಮನವಿ ಸಲ್ಲಿಸಿರುವ ಗಜೇಂದ್ರ, ಶೆಟ್ಟಿಹಳ್ಳಿಕೆರೆ ಅಂಗಳ ಮತ್ತು ಬಫರ್ ವಲಯವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಕಾರಣ ತೆರವಿಗೆ ರಾಜಕಾರಣಿಗಳು ಪರೋವಾಗಿ ತಡೆ ಮಾಡುತ್ತಿದ್ದಾರೆ. ಅನಧಿಕೃತ ಒತ್ತುವರಿ ತೆರವುಗೊಳಿಸುವ ಪೂರ್ವದಲ್ಲೆ ಕೆರೆಯನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಲು ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೆರೆಯ ಬಫರ್ ವಲಯವನ್ನು ಗುರುತಿಸಿ ನಂತರ ಒತ್ತುವರಿ ತೆರವುಗೊಳಿಸಿ ಕೆರೆ ಆವರಣ ಮತ್ತು ಬಫರ್ ವಲಯದ ಸುತ್ತಲೂ ಬೇಲಿ ಹಾಕುವ ಮೂಲಕ ಕೆರೆಯನ್ನು ರಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಎಂದು ಜು.29 ರಂದು ಬೆಂಗಳೂರಿನ ಎಂ.ಎಸ್ ಬಿಲ್ಡಿಂಗ್ನಲ್ಲಿರುವ ಲೋಕಾಯುಕ್ತ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.