ಜಿಲ್ಲೆ

ಕಂಸಾಗರ ಗೇಟ್ ಸಮೀಪ ರೈಲು ನಿಲುಗಡೆಗೆ ಮನವಿ

ಜಿ.ಹೆಚ್. ಧನ್ಯಕುಮಾರ್

ಕಡೂರು: ಕಡೂರು ಪಟ್ಟಣದ ರೈಲ್ವೆ ನಿಲ್ದಾಣದಿಂದ 9 ಕಿಮೀ ದೂರದಲ್ಲಿರುವ ಸರಸ್ವತಿಪುರ ಗ್ರಾಪಂಗೆ ಒಳಪಡುವ ಸರಸ್ವತಿಪುರ ಮತ್ತು ಕಂಸಾಗರ ಗೇಟ್‌ಮೂಲಕ ರೈಲು ಹಳಿ ಹಾದುಹೋಗಿದ್ದು, ಈ ಭಾಗದಲ್ಲಿ ತಾತ್ಕಲಿಕ ರೈಲು ನಿಲ್ದಾಣ ಮತ್ತು ರೈಲು ನಿಲುಗಡೆ ಅವಕಾಶ ಕಲ್ಪಿಸುವಂತೆ ಕಂಸಾಗರ ಗ್ರಾಮಸ್ಥರು ರೈಲ್ವೆ ಸಚಿವ ವಿ.ಸೋಮಣ್ಣಗೆ ಚಿಕ್ಕಮಗಳೂರಿನಲ್ಲಿ ಮನವಿ ಸಲ್ಲಿಸಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು ಆರೇಳು ಸಾವಿರ ಮನೆಗಳಿದ್ದು, ಹೆಚ್ಚಾಗಿ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಗ್ರಾಮಸ್ಥರು ಜಿಲ್ಲಾ ಕೇಂದ್ರ ಹಾಗೂ ಶಿವಮೊಗ್ಗದ ವಿವಿಧ ಭಾಗಗಳಿಗೆ ಪ್ರಯಾಣಿಸುತ್ತಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಗೇಟ್‌ಗೆ ಹತ್ತಿರವಾಗುವಂತೆ ತಾತ್ಕಲಿಕ ನಿಲ್ದಾಣ ಮತ್ತು ರೈಲು ನಿಲುಗಡೆಗೆ ಹೆಚ್ಚು ಅವಶ್ಯಕತೆ ಇರಲಿದೆ ಎಂದು ರೈಲ್ವೆ ಸಚಿವರಲ್ಲಿ ಮನವರಿಕೆ ಮಾಡಿದರು.

ವಕೀಲ ಕೆ.ಎನ್.ಬೊಮ್ಮಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ರೇವಣ್ಣ, ಗ್ರಾಮದ ಮುಖಂಡರಾದ ಕೆ.ರವಿಕುಮಾರ್, ಕಾಳೇಗೌಡ, ಮಂಜುನಾಥ್, ಎಸ್.ಎಲ್.ಭರತೇಶ್, ಚನ್ನಾಪುರ ರಾಜಶೇಖರ್, ಜಯಣ್ಣ, ಮಲ್ಲೇಶ್ ಮತ್ತಿತರಿದ್ದರು.