ಜಿಲ್ಲೆ

ಸರ್ಕಾರಿ ವೈದ್ಯಕಿಯ ಕಾಲೇಜು ಆರಂಭಕ್ಕೆ ಮನವಿ

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಚಿವ ಡಾ ಎಂ.ಸಿ.ಸುಧಾಕರ್​, ಶಾಸಕರಾದ ಪ್ರದಿಪ್​ ಈಶ್ವರ್​ ಅಯ್ಯರ್​, ಎಸ್​.ಎನ್​.ಸುಬ್ಬಾರೆಡ್ಡಿ ಚರ್ಚಿಸಿದರು.


ಜಿಲ್ಲೆಯ ಶಾಸಕರ ನಿಯೋಗದಿಂದ ಸಿಎಂಗೆ ಪತ್ರ : ತನಿಖೆಗೆ ಒತ್ತಾಯ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ತಾಲೂಕಿನ ಆರೂರು ಬಳಿಯ ನಂದಿ ಸರ್ಕಾರಿ ವೈದ್ಯಕಿಯ ಶಿಣ ಕಾಲೇಜನ್ನು ತ್ವರಿತವಾಗಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ಶಾಸಕರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್​, ಶಾಸಕರಾದ ಪ್ರದಿಪ್​ ಈಶ್ವರ್​, ಎಸ್​.ಎನ್​.ಸುಬ್ಬಾರೆಡ್ಡಿ ಸೇರಿದ ನಿಯೋಗವು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ಸಮಸ್ಯೆಯ ಬಗ್ಗೆ ಗುರುವಾರ ಗಮನ ಸೆಳೆದಿದೆ. ತ್ವರಿತವಾಗಿ ವೈದ್ಯಕಿಯ ಕೋರ್ಸಿನ ತರಗತಿಗಳು, ಆರೋಗ್ಯ ಸೇವೆ ಪ್ರಾರಂಭಿಸಬೇಕಿದೆ. ಇದರ ನಡುವೆ ಆಸ್ಪತ್ರೆ ನಿರ್ಮಾಣಕ್ಕೆ ರ್ಖಚಾದ ಅನುದಾನ, ಬಾಕಿ ಉಳಿದಿರುವ ಕೆಲಸಗಳ ಬಗ್ಗೆ ಗೊಂದಲ ಉಂಟಾಗಿದ್ದು ಇದನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದೆ.

ಖುದ್ದು ಭೇಟಿ ನೀಡಲು ಸೂಚನೆ
ಸಂಬಂಧಪಟ್ಟ ಸೆ.1ರಂದು ಕಾಲೇಜಿಗೆ ಭೇಟಿ ನೀಡಿ, ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ವೈದ್ಯಕಿಯ ಶಿಕ್ಷಣ ಸಚಿವ ಶರಣ ಪ್ರಕಾಶ್​ ಪಾಟೀಲ್​ಗೆ ಸೂಚಿಸಿದ್ದಾರೆ. ಅಲ್ಲಿನ ಸಮಸ್ಯೆ ತಿಳಿದುಕೊಂಡು ತ್ವರಿತವಾಗಿ ಬಗೆಹರಿಸುವ ಮೂಲಕ ಜನರಿಗೆ ಗುಣಮಟ್ಟದ ಸೇವೆ ಒದಗಿಸುವಂತಾಗಬೇಕು ಎಂದು ಸಿಎಂ ತಿಳಿಸಿದ್ದಾರೆ.


ವಿವಾದ ಸೃಷ್ಟಿಸಿದ ಅನುದಾನ
ರಾಜ್ಯದ ಆರೋಗ್ಯ ಮತ್ತು ವೈದ್ಯಕಿಯ ಶಿಣ ಇಲಾಖೆ ಸಚಿವರಾಗಿದ್ದಾಗ ಡಾ.ಕೆ.ಸುಧಾಕರ್​ ಜಿಲ್ಲೆಗೆ ವೈದ್ಯಕಿಯ ಕಾಲೇಜು ಮಂಜೂರು ಮಾಡಿಸಿದ್ದರು. 2019ರ ನವೆಂಬರ್​ನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಭೂಮಿಪೂಜೆ ನೆರವೇರಿಸಿದ್ದರು. ಇದರ ನಡುವೆ ಆರಂಭದಲ್ಲಿ 525 ಕೋಟಿ ರೂ. ವೆಚ್ಚದಲ್ಲಿ ಕಾಲೇಜು ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲಾಗಿತ್ತು. ಆದರೆ, ಕಾಮಗಾರಿ ವೆಚ್ಚವು ಯಾವುದೇ ಅನುಮೋದನೆ ಪಡೆಯದೆ 810 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇದಕ್ಕೆ ಸಚಿವ ಸಂಪುಟದ ಒಪ್ಪಿಗೆಯನ್ನೂ ಪಡೆದಿಲ್ಲ ಎಂಬ ಆರೋಪ ಕೇಳಿ ಬಂದಿದೆ.


ತನಿಖಾಧಿಕಾರಿಗಳ ಭೇಟಿ
ಯೋಜನಾ ವೆಚ್ಚ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಸರ್ಕಾರವು ತನಿಖೆಗೆ ಸೂಚಿಸಿದೆ. ಇದರಿಂದ ಇತ್ತೀಚೆಗೆ ವೈದ್ಯಕಿಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ತಂಡವು ಆಸ್ಪತ್ರೆಗೆ ಭೇಟಿ ನೀಡಿ, ಕಾಮಗಾರಿಗಳ ನಿರ್ವಹಣೆ, ಖರ್ಚಿನ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಇದರ ಬಗ್ಗೆ ಸರ್ಕಾರಕ್ಕೆ ವರದಿ ಕೊಡಲಿದೆ.
ಕನಕಪುರದಲ್ಲಿ 525 ಕೋಟಿ ರೂ.ವೆಚ್ಚದಲ್ಲಿ ವೈದ್ಯಕಿಯ ಶಿಣ ಕಾಲೇಜು ನಿರ್ಮಾಣಕ್ಕೆ ಟೆಂಡರ್​ ಆಗಿತ್ತು. ಆದರೆ, ಆ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತಂದಾಗ ಯೋಜನಾ ವೆಚ್ಚವು 810 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಇದು ಅನುಮಾನಕ್ಕೆ ಕಾರಣ ಆಗುವುದಿಲ್ಲವೇ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್​ ಪ್ರಶ್ನಿಸಿದ್ದರು. ಮತ್ತೊಂದೆಡೆ ಯಾವುದೇ ತನಿಖೆಗೂ ಸಿದ್ಧ. ಅನುದಾನ ಬಿಡುಗಡೆ ಮತ್ತು ಖರ್ಚಿನ ವಿಚಾರವಾಗಿ ತಜ್ಞರ ಅಭಿಪ್ರಾಯ ಪಡೆದು, ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಜಿ ಸಚಿವ ಡಾ ಕೆ.ಸುಧಾಕರ್​ ತಿಳಿಸಿದ್ದಾರೆ.


ಹೆಚ್ಚುವರಿ ಹಣ ಅಗತ್ಯ
ಬಿಲ್​ ಪಾವತಿಸುವವರೆಗೂ ನಿರ್ಮಾಣದ ಕಟ್ಟಡವನ್ನು ಹಸ್ತಾಂತರಿಸುವುದಿಲ್ಲ ಎಂಬುದಾಗಿ ಗುತ್ತಿಗೆದಾರರು ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಕಾಲೇಜು ಪ್ರಾರಂಭವಾಗದೆ ತಾತ್ಕಾಲಿಕ ಕಟ್ಟಡದಲ್ಲಿರುವ ವೈದ್ಯಕಿಯ ವಿದ್ಯಾರ್ಥಿಗಳು ಮೂಲಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹೊಸದಾಗಿ ದಾಖಲಾತಿ, ಕಾಲೇಜಿನ ಮಂಜೂರಾತಿ ಸೇರಿ ನಾನಾ ವಿಚಾರಗಳಿಗೆ ತೊಂದರೆಯಾಗುತ್ತಿದೆ ಎಂಬುದಾಗಿ ಸರ್ಕಾರಿ ವೈದ್ಯಕಿಯ ಕಾಲೇಜಿನ ಡೀನ್​ ಹೇಳಿದ್ದಾರೆ.


ವೈದ್ಯಕಿಯ ಕಾಲೇಜನ್ನು ತ್ವರಿತವಾಗಿ ಪ್ರಾರಂಭಿಸಲು, ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲಾಗಿದೆ.

ಪ್ರದಿಪ್​ ಈಶ್ವರ್​, ಶಾಸಕ, ಚಿಕ್ಕಬಳ್ಳಾಪುರ