ಜಮೀನು ದಾರಿ ಸಮಸ್ಯೆಇತ್ಯರ್ಥಕ್ಕೆ ಕಾನೂನು ತಿದ್ದುಪಡಿ ತರುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂದ ಪದಾಧಿಕಾರಿಗಳು ಬೆಂಗಳೂರಿನ ಕಂದಾಯ ಇಲಾಖೆ ಆಯುಕ್ತ ಪಿ. ಸುನೀಲಕುಮಾರ ಅವರಿಗೆ ಭೇಟಿ ಮಾಡಿ ಚರ್ಚೆ ನಡೆಸಿದರು. ಅರವಿಂದ ಕುಲಕರ್ಣಿ, ಪಾಂಡು ಹ್ಯಾಟಿ, ವಿಠಲ ಬಿರಾದಾರ ಮತ್ತಿತರರಿದ್ದಾರೆ.  
ಜಿಲ್ಲೆ

ಜಮೀನು ದಾರಿ ಸಮಸ್ಯೆ ಇತ್ಯರ್ಥಕ್ಕೆ ಮನವಿ

ಗಿರೀಶ ಸಗರ

ವಿಜಯಪುರ: ಜಮೀನು ದಾರಿ ಸಮಸ್ಯೆ ಇತ್ಯರ್ಥಕ್ಕೆ ಮುಂಬರುವ ಅಧಿವೇಶನದಲ್ಲಿ ಚರ್ಚಿಸಿ ಕ್ರಮ ವಹಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂದ ಪದಾಧಿಕಾರಿಗಳು ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿರುವ ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲಕುಮಾರ ಅವರನ್ನು ಬುಧವಾರ ಭೇಟಿ ಮಾಡಿ ಚರ್ಚೆ ನಡೆಸಿದರು.

ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯದ ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗಲು ಮುಂದಿನ ರೈತರು ದಾರಿ ನೀಡದ ಹಿನ್ನೆಲೆಯಲ್ಲಿ ಜಮೀನು ಬಿತ್ತನೆ ಮಾಡದೆ ರೈತ ಕುಟುಂಬಗಳು ಉಪವಾಸ ಬೀಳುವ ಪರಿಸ್ಥಿತಿ ಬಂದಿದೆ.

ಕಳೆದ 10 ವರ್ಷಗಳಿಂದ ಹೋರಾಟ ನಡೆಸಿ ಸರ್ಕಾರದ ಗಮನಕ್ಕೆ ತಂದರೂ ಸರ್ಕಾರ ಮಾತ್ರ ಕಾಟಾಚಾರಕ್ಕೆ ಎಂಬಂತೆ ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಯಾವೊಬ್ಬ ತಹಸೀಲ್ದಾರರು ದಾರಿ ಮಾಡಿಕೊಟ್ಟ ಉದಾಹರಣೆಗಳಿಲ್ಲ. ಈ ಬಗ್ಗೆ ತಹಸೀಲ್ದಾರರಿಗೆ ವಿಚಾರಿಸಿದರೆ ಸರ್ಕಾರದ ಸುತ್ತೋಲೆಯಲ್ಲಿ ದಾರಿ ಮಾಡಿಕೊಡಲು ಸ್ಪಷ್ಟ ಆದೇಶವಿಲ್ಲ ಎಂದು ರೈತರಿಗೆ ಹಾರಿಕೆ ಉತ್ತರ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಗೆ ಬೆಲೆ ಇಲ್ಲದಂತಾಗಿದ್ದು, ಅದರಿಂದ ಜು. 15 ರಿಂದ ಪ್ರಾರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಜಮೀನು ದಾರಿ ವಿಷಯವನ್ನು ಚರ್ಚಿಸಿ ಸೂಕ್ತ ಕಾನೂನು ತಿದ್ದುಪಡಿ ಮಾಡಿ ತಹಸೀಲ್ದಾರರಿಗೆ ದಾರಿ ಮಾಡಿಕೊಡುವ ಅಧಿಕಾರ ನೀಡಬೇಕು.

ಅಲ್ಲದೆ, ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರದಂತೆ ಕಾನೂನು ತಿದ್ದುಪಡಿ ಮಾಡುವ ಮೂಲಕ ಗಂಭೀರ ಸಮಸ್ಯೆಯನ್ನು ಅಧಿವೇಶನದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರೈತ ಮುಖಂಡರಾದ ಪಾಂಡು ಹ್ಯಾಟಿ, ವಿಠಲ ಬಿರಾದಾರ, ಹೊನಕೇರೆಪ್ಪ ತೆಲಗಿ, ಮಲಗೆಪ್ಪ ಸಾಸನೂರ, ಲಾಲಸಾಬ ಹಳ್ಳೂರ, ಬಸಪ್ಪ ತೋಟದ, ಮುದನೂರ ಬಿ., ಪ್ರಭುಗೌಡ ಪೋತರಡ್ಡಿ ಮತ್ತಿತರರಿದ್ದರು.