ಶಿರಸಿ: ಬಿಸಿಯೂಟ ತಯಾರಕರಿಗೆ ವೇತನವನ್ನು ಆರು ಸಾವಿರ ರೂ.ಗಳಿಗೆ ಹೆಚ್ಚಿಸುವುದು, ಎಸ್‌ಡಿಎಂಸಿ ಮತ್ತು ಮುಖ್ಯಗುರುಗಳ ಖಾತೆಯನ್ನು ಈ ಹಿಂದಿನಂತೆ ಮುಂದುವರಿಸಬೇಕು ಎಂದು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಜಿಲ್ಲಾ ಸಂಘಟನೆ ವತಿಯಿಂದ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಗುರುವಾರ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಸರ್ಕಾರವು ಪ್ರಣಾಳಿಕೆಯಲ್ಲಿ 6ನೇ ಗ್ಯಾರಂಟಿಯಾಗಿ ಘೋಷಿಸಿದಂತೆ ಜುಲೈನಲ್ಲಿ ಮಂಡಿಸುವ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರಿಗೆ ಆರು ಸಾವಿರ ರೂ. ವೇತನ ಹೆಚ್ಚಿಸಬೇಕು, ನಿವೃತ್ತಿ ವೇತನ ಹಾಗೂ ಇಡಿಗಂಟು ನೀಡಬೇಕು. ಎಸ್‌ಡಿಎಂಸಿ ಹಾಗೂ ಮುಖ್ಯ ಗುರುಗಳ ಜಂಟಿ ಖಾತೆ ತೆರೆಯಲು ಆದೇಶ ಹೊರಡಿಸಿರುವುದನ್ನು ಕೂಡಲೆ ಹಿಂಪಡೆದು ಮೊದಲಿನಂತೆ ಮುಂದುವರಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಎಸಿ ಕಚೇರಿ ವ್ಯವಸ್ಥಾಪಕ ಡಿ.ಆರ್. ಬೆಳ್ಳಿಮನೆ ಮನವಿ ಸ್ವೀಕರಿಸಿದರು. ಸಂಘಟನೆಯ ಜಿಲ್ಲಾ ಪ್ರಧಾನಕಾರ್ಯದರ್ಶಿ ಪರಮೇಶ್ವರ ಕೆ. ಹೊಸಕೊಪ್ಪ, ಮುಂಡಗೋಡ ತಾಲೂಕಾಧ್ಯಕ್ಷೆ ಜರೀನಾ, ಉಪಾಧ್ಯಕ್ಷೆ ಅನ್ನಪೂರ್ಣ, ಕಾರ್ಯದರ್ಶಿ ಲಕ್ಷ್ಮೀ, ಖಜಾಂಚಿ ರವಿಜಾನ್, ಸಿದ್ದಾಪುರ ತಾಲೂಕಾಧ್ಯಕ್ಷೆ ಸರಸ್ವತಿ ಎನ್. ಭಟ್, ಉಪಾಧ್ಯಕ್ಷೆ ಮೀನಾಕ್ಷಿ ಹಲಗೇರಿ, ಕಾರ್ಯದರ್ಶಿ ಅನಗೋಡ ಭುವನೇಶ್ವರಿ, ಖಜಾಂಚಿ ಶಮಿಮ್ ಭಾನು ಇತರರಿದ್ದರು.