ನಾಪೋಕ್ಲು : ಭಾಗಮಂಡಲ ನಾಡು ಗೌಡ ಸಮಾಜದ ಪ್ರಮುಖರ ನಿಯೋಗ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ನೇತೃತ್ವದಲ್ಲಿ ಮುಖ್ಯಮಂತ್ರಿಗಳದ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದೆ.
ಭಾಗಮಂಡಲ ಗ್ರಾಮದಲ್ಲಿ 1983ರಲ್ಲಿ ನಿರ್ಮಿಸಿರುವ ಗೌಡ ಸಮುದಾಯ ಭವನದಲ್ಲಿ ಮೂಲಸೌಲಭ್ಯಗಳ ಕೊರತೆ ಇದ್ದು, ಭಾಗಮಂಡಲ ಭಾಗದಲ್ಲಿ ಏಕೈಕ ಸಮುದಾಯ ಭವನ ಇದಾಗಿದೆ. ಗೌಡ ಸಮಾಜ ಮತ್ತು ಎಲ್ಲ ಜಾತಿ-ಧರ್ಮದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನವಾಗಿ ಸಮುದಾಯ ಭವನದ ನಿರ್ಮಿಸಲು ಅನುದಾನ ಮಂಜೂರು ಮಾಡಲು ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ಮಂಜೂರು ಮಾಡುವ ಬಗ್ಗೆ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಗೌಡ ಸಮಾಜದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ನಿಯೋಗದಲ್ಲಿ ನಾಡು ಗೌಡ ಸಮಾಜದ ಅಧ್ಯಕ್ಷ ಕುದ್ಪಾಜೆ ಪಿ.ಪಳಂಗಪ್ಪ, ಹೊಸೂರು ಸತೀಶ್ ಜೋಯಪ್ಪ, ಪ್ರಕಾಶ್ ಕುದ್ಪಾಜೆ, ದೇವಂಗೋಡಿ ಹರ್ಷ, ಕುಯ್ಯಮುಡಿ ರಂಜು, ನಿಡ್ಯಮಲೆ ರವಿ, ಕುದ್ಪಾಜೆ ಗಗನ್, ನಿಡ್ಯಮಲೆ ದಾಮೋದರ, ಅಮೆ ಹರೀಶ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.