ಜಿಲ್ಲೆ

ಹೆದ್ದಾರಿ ಅಭಿವೃದ್ಧಿಗಾಗಿ ಹೆಚ್ಚುವರಿ ಅನುದಾನಕ್ಕೆ ಮನವಿ

ಪ್ರಸಿನ್ ಕೆ.ಆರ್

ಹಾಸನ: ಸಂಸದ ಶ್ರೇಯಸ್ ಪಟೇಲ್ ದೆಹಲಿಯಲ್ಲಿ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಬೇಲೂರು-ಹಾಸನ ರಾಷ್ಟ್ರೀಯ ಹೆದ್ದಾರಿ-373ರ ಕಾಮಗಾರಿಗೆ ಹೆಚ್ಚುವರಿ ಅನುದಾನ ಕೋರಿ ಮನವಿ ಸಲ್ಲಿಸಿದರು.

ಬೇಲೂರು-ಹಾಸನ ಭಾಗದ ರಾಷ್ಟ್ರೀಯ ಹೆದ್ದಾರಿ-373ನ್ನು ನಾಲ್ಕು ಪಥವಾಗಿ ವಿಸ್ತರಿಸುವ ಮಹತ್ವದ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿಗೆ ಸಂಬಂಧಿಸಿದಂತೆ, ತಿದ್ದುಪಡಿಗೊಳಿಸಿದ ವೆಚ್ಚದ ಅನುದಾನಕ್ಕೆ ಅನುಮೋದನೆ ನೀಡುವಂತೆ ಸಚಿವರಲ್ಲಿ ಸಂಸದರು ಮನವಿ ಮಾಡಿದರು.

ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ತಿದ್ದುಪಡಿ ಮಾಡಿದ ವೆಚ್ಚದ ಅನುದಾನ 723.83 ಕೋಟಿ ರೂ. ಆಗಿದೆ. ಈ ಯೋಜನೆ ಹಾಸನ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯದ ಜನತೆಗೆ ಅತ್ಯಂತ ಮುಖ್ಯವಾಗಿದೆ ಎಂದು ವಿವರಿಸಿದರು.

ಹೆದ್ದಾರಿ ನಿರ್ಮಾಣದಿಂದ ಪ್ರಾದೇಶಿಕ ಸಂಪರ್ಕ ಸುಧಾರಿಸುವುದರ ಜತೆಗೆ ಬೇಲೂರು-ಹಾಸನ ನಡುವೆ ಸರಕು ಹಾಗೂ ಪ್ರಯಾಣಿಕರ ವೇಗದ ಸಂಚಾರಕ್ಕೆ ಅನುಕೂಲವಾಗಲಿದೆ. ಹಾಗಾಗಿ ಶೀಘ್ರ ಅನುದಾನ ಕಲ್ಪಿಸುವಂತೆ ಸಂಸದರು ಮನವಿ ಮಾಡಿದರು.