ಜಿಲ್ಲೆ

ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕ್ರಮಕ್ಕೆ ಮನವಿ

ಕುಮಟಾ: ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ಸರ್ಕಾರಿ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯವಾಗಿ ನಿಂದಿಸಿದ ವ್ಯಕ್ತಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಿ ನೌಕರರ ಸಂಘದಿಂದ ಉಪವಿಭಾಗಾಧಿಕಾರಿ ಕಚೇರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ತಾಲೂಕು ಆಡಳಿತ ಸೌಧದ ಆರ್‌ಆರ್‌ಟಿ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಮಧುರಾ ಎಂ.ನಾಯ್ಕ ಅವರಿಗೆ ಮಾಹಿತಿ ಹಕ್ಕಿನಡಿ ಕೇಳಿದ ವಿಷಯಕ್ಕೆ ಸಂಬಂಧಿಸಿ ವಿನಾಕಾರಣವಾಗಿ ಕಾರವಾರದ ನಂದನಗದ್ದಾದ ವಕೀಲ ಗಿರೀಶ ಕೃಷ್ಣ ನಾಯ್ಕ ಎಂಬುವವರು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರು ಅವರ ವರ್ತನೆಗೆ ಆಕ್ಷೇಪಿಸಿದಾಗ ಅವರೊಂದಿಗೂ ಅನುಚಿತವಾಗಿ ವರ್ತಿಸಿದ್ದಾರೆ. ಜವಾಬ್ದಾರಿಯುತ ವಕೀಲರಾಗಿ ಘನತೆಗೆ ತಕ್ಕಂತೆ ವರ್ತಿಸದೇ ಮಹಿಳಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದು ಅಕ್ಷಮ್ಯ. ಆದ್ದರಿಂದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್ ಅಶೋಕ ಭಟ್ ಮನವಿ ಸ್ವೀಕರಿಸಿದರು. ಕಂದಾಯ ನೌಕರರ ಸಂಘದ ಅಧ್ಯಕ್ಷ ಟಿ.ಎಸ್. ಗಾಣಿಗೇರ್, ಪ್ರಧಾನ ಕಾರ್ಯದರ್ಶಿ ವಿನೋದ ರಾವ್ ಜಿಪಿ, ಗ್ರಾಮ ಆಡಳಿತಾಧಿಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ನಾಯ್ಕ, ಶಿರಸ್ತೇದಾರ್ ಪಿ.ಎ. ಪೂಜಾರ್, ಉಪತಹಸೀಲ್ದಾರ್ ಗೀತಾ ಎಂ. ನಾಯ್ಕ, ವಸಂತ ಸಾವಂತ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವಿನಾಯಕ ಎಸ್. ಭಂಡಾರಿ, ಕಾರ್ಯದರ್ಶಿ ಉಮೇಶ ನಾಯ್ಕ, ಗೌರವಾಧ್ಯಕ್ಷ ಆನಂದು ನಾಯ್ಕ, ಪದಾಧಿಕಾರಿಗಳಾದ ನಾಗರಾಜ ನಾಯ್ಕ, ಅನುರಾಧ ಭಟ್, ಗಣೇಶ ನಾಯ್ಕ, ಶ್ರೀಧರ ಮಡಿವಾಳ, ಲಕ್ಷ್ಮಣ ಪಾವಸ್ಕರ್, ಉಪಾಧ್ಯಕ್ಷ ಬೀರದಾಸ ಗುನಗಾ ಇತರರು ಇದ್ದರು.