ಮದ್ದೂರು: ತಾಲೂಕಿನ ಕೆ.ಹೊನ್ನಲಗೆರೆಯ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆರ್.ಬಿ.ಅಪ್ಪಾಜಿಗೌಡ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ಕೃಷ್ಣೇಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಆರ್.ಬಿ.ಅಪ್ಪಾಜಿಗೌಡ ಅವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಆಶಾ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಅಭಿನಂದನೆ ಸ್ಪೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಆರ್.ಬಿ.ಅಪ್ಪಾಜಿಗೌಡ ನನ್ನನ್ನು ಅಧ್ಯಕ್ಷನನ್ನಾಗಿಸಲು ಶ್ರಮಿಸಿದ ಸಂಘದ ನಿರ್ದೇಶಕರು ಹಾಗೂ ಸ್ಥಳೀಯ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಸಹಕಾರ ಸಂಫದ ಅಭಿವೃದ್ಧಿಗೆ ಹಾಗೂ ರೈತರಿಗೆ ಸಂಘದ ವತಿಯಿಂದ ಸಿಗುವ ಹಲವು ಸೌಲಭ್ಯಗಳನ್ನು ಸಕಾಲದಲ್ಲಿ ದೊರಕಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಸಕಾಲದಲ್ಲಿ ರೈತರಿಗೆ ಕ್ರಿಮಿನಾಶಕ, ಬಿತ್ತನೆ ಬೀಜ, ರಸಗೊಬ್ಬರ ಇನ್ನಿತರ ಪರಿಕರಗಳನ್ನು ವಿತರಿಸಲು ಕ್ರಮವಹಿಸಲಾಗುವುದು ಎಂದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಆರ್.ಬಿ.ಅಪ್ಪಾಜಿಗೌಡ ಅವರನ್ನು ಸಂಘದ ನಿರ್ದೇಶಕರು ಹಾಗೂ ಸ್ಥಳೀಯ ಮುಖಂಡರು ಅಭಿನಂದಿಸಿ ಗೌರವಿಸಿದರು.
ಸಂಘದ ಉಪಾಧ್ಯಕ್ಷೆ ಸಣ್ಣಮ್ಮ, ನಿರ್ದೇಶಕರಾದ ಕೃಷ್ಣೇಗೌಡ, ಕೆಂಪೇಗೌಡ, ತಿಬ್ಬೇಗೌಡ, ಚೆನ್ನವೀರಯ್ಯ, ದೇವರಾಜು, ಮಾದಯ್ಯ, ಚೆನ್ನಮ್ಮ, ಪುಟ್ಟಮಾದಯ್ಯ, ಎಚ್.ಡಿ.ಮಲ್ಲಿಕಾರ್ಜುನ್, ಮುಖಂಡರಾದ ಮುತ್ತುರಾಜ್, ಪುಟ್ಟಸ್ವಾಮಿ, ಆರ್.ಸಿ.ಎಸ್.ಮಹೇಶ್, ಬಸವಣ್ಣ, ರಾಮಣ್ಣ, ಬ್ಯಾಡರಹಳ್ಳಿ ಶಿವಕುಮಾರ್, ಶಿವರಾಮು ಬಸವೇಗೌಡ ಇದ್ದರು.