ಬೆಂಗಳೂರು: ಬಹುಮುಖಿ ಗೆಳೆಯರ ಬಳಗ, ಸುದ್ಧಿ ಸಂಗಾತಿ ಯೂಟ್ಯೂಬ್ ಚಾನಲ್ ಹಾಗೂ ಅಪೂರ್ವ ಪ್ರಕಾಶನ ಸಹಯೋಗದಲ್ಲಿ ನೀಡುವ ‘ಅಪ್ಪ’ ಪ್ರಶಸ್ತಿಗೆ 2021-2023ರ ಅವಧಿಯಲ್ಲಿ ಪ್ರಕಟವಾದ ವಿವಿಧ ಪ್ರಕಾರಗಳ ನಾಲ್ಕು ಕೃತಿಗಳು ಆಯ್ಕೆಯಾಗಿವೆ.
ಕೊಡಗಿನ ಸ್ಮಿತಾ ಅಮತ್‌ರಾಜ್ ಅವರ ‘ನೆಲದಾಯ ಪರಿಮಳ’ (ಲಲಿತ ಪ್ರಬಂಧಗಳ ಸಂಕಲನ),ಬೆಂಗಳೂರಿನ ಡಾ. ಟಿ. ವೆಂಕಟೇಶಮೂರ್ತಿ ಅವರ ‘ಕನ್ನಡ ನಾಟಕಗಳು: ರಾತ್ರಿ ರೂಪಕಗಳು’ (ವಿಮರ್ಶಾತ್ಮಕ ಕೃತಿ), ಬಾಗಲಕೋಟೆಯ ಮಲ್ಲಿಕಾರ್ಜುನ ಶಲ್ಲಿಕೇರಿ ಅವರ ‘ದೀಡೆಕರೆ ಜಮೀನು’ (ಕಥಾ ಸಂಕಲನ) ಹಾಗೂ ತುಮಕೂರಿನ ಗುರುಪ್ರಸಾದ್ ಕಂಟಲಗೆರೆ ಅವರ ‘ಟ್ರಂಕು ತಟ್ಟೆ’ (ಅನುಭವ ಕಥನ) ಪ್ರಶಸ್ತಿಗೆ ಆಯ್ಕೆಯಾಗಿರುವ ಮೌಲಿಕ ಕೃತಿಗಳಾಗಿವೆ.
ಪ್ರಶಸ್ತಿಗಾಗಿ ರಾಜ್ಯದ ನಾನಾ ಭಾಗಗಳಿಂದ 165 ಕೃತಿಗಳು ಬಂದಿದ್ದವು, ಅವುಗಳಲ್ಲಿ ಈ ನಾಲ್ಕು ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆ. 4ರಂದು ತುಮಕೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಬಳಗದ ಸಂಚಾಲಕ ಟಿ. ಸತೀಶ್ ಜವರೇಗೌಡ ತಿಳಿಸಿದ್ದಾರೆ.