-ಶ್ರವಣ್‌ಕುಮಾರ್ ನಾಳ, ಮಂಗಳೂರು
ಕಳೆದ 5-6 ವರ್ಷಗಳಲ್ಲಿ ಮಂಗಳೂರು ನಗರದ ಯಾವೆಲ್ಲ ಪ್ರದೇಶಗಳು ನೆರೆ ಆವರಿಸಿ ಮುಳುಗಡೆಯಾಗಿವೆ ಎಂಬುದರ ಮಾಹಿತಿಯನ್ವಯ ಈಬಾರಿ ನೆರೆ ಪೀಡಿತ ಪ್ರದೇಶವನ್ನು ಮಳೆಗಾಲದ ಮುಂಚೆಯೇ ಆ್ಯಪ್ ತಂತ್ರಜ್ಞಾನದ ಮೂಲಕ ಮ್ಯಾಪಿಂಗ್ ಮಾಡುವ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ.
ಮಳೆಗಾಲದ ಪೂರ್ವಸಿದ್ದತೆಗೆ ಪಾಲಿಕೆಯಿಂದ ಕ್ರಮ ವಹಿಸಲಾಗಿದ್ದು, ರಾಜಕಾಲುವೆ ಹೂಳೆತ್ತಲು ಕ್ರಮಕೈಗೊಳ್ಳುವುದು, ಚರಂಡಿಯಿಂದ ತೆಗೆದ ಹೂಳು ವಿಲೇವಾರಿಗೊಳಿಸುವುದು ಸಣ್ಣ ಚರಂಡಿ ಹೂಳು ತೆಗೆಯಲು ಕ್ರಮ, ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳುವ ಕಾರ್ಯ ಮಾಡಲಾಗುತ್ತಿದೆ. ಜತೆಗೆ ವಿಪತ್ತು ಸಂಭವಿಸುವ ಸಂಭವನೀಯ ಪ್ರದೇಶ ಪಟ್ಟಿ ಮಾಡಿ, ನಿರ್ವಹಣೆ ಕುರಿತಂತೆ ಯೋಜನೆ ಸಿದ್ದಪಡಿಸುವುದು, ವಿಪತ್ತು ನಿರ್ವಹಣೆಗೆ ರಕ್ಷಣಾ ಸಾಮಾಗ್ರಿ ವಲಯವಾರು ಸಿದ್ದಪಡಿಸುವುದು, ವಲಯವಾರು ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಟ್ಟುಕೊಂಡಿರುವುದು, ಪರಿಹಾರ ಕೇಂದ್ರಗಳ ಸ್ವಚ್ಛತೆ, ನೈರ್ಮಲ್ಯ, ನಿರ್ಮಾಣ ಹಂತದ ಕಟ್ಟಡ ಚಟುವಟಿಕೆಗಳ ಮೇಲೆ ವಿಶೇಷ ನಿಗಾ, ಕಾನೂನು ಪಾಲನೆ ನೋಡಿಕೊಳ್ಳುವುದು, ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ತಡೆಗೆ ನಿರಂತರ ಕಾರ್ಯಚಟುವಟಿಕೆ, ಕಂಟ್ರೋಲ್ ರೂಂ.ಗಳಿಂದ ಸ್ವೀಕೃತವಾದ ಎಲ್ಲಾ ನಿರ್ದೇಶನಗಳನ್ನು ಪಾಲಿಸುವಂತಹ ಮಹತ್ತರ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ನೆರೆಪೀಡಿತ ಪ್ರದೇಶಗಳದ್ದೇ ಪಾಲಿಕೆಗೆ ತಲೆನೋವು. ಈ ಹಿನ್ನೆಲೆಯಲ್ಲಿ ನೆರೆ ಪೀಡಿತ ಪ್ರದೇಶಗಳನ್ನು ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಮಿತಿಯ ಆ್ಯಪ್‌ನಲ್ಲಿ ಜಿಯೋ ಮ್ಯಾಪಿಂಗ್ ಮಾಡುವ ಮಹತ್ತರ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ.
*ಆ್ಯಪ್ ಮೂಲಕ ಮ್ಯಾಪಿಂಗ್
ಆ್ಯಪ್ ತಂತ್ರಜ್ಞಾನದ ಮೂಲಕ ನೆರೆ ಪ್ರದೇಶದ ಮಾಹಿತಿ ತಕ್ಷಣದಲ್ಲಿ ಲಭ್ಯವಾಗಲಿದೆ. ಈಗಾಗಲೇ ಮಂಗಳೂರು ನಗರದ ಯಾವೆಲ್ಲಾ ವಾರ್ಡ್‌ಗಳಲ್ಲಿ ನೆರೆಪೀಡಿತ ಪ್ರದೇಶಗಳಿವೆ ಎಂಬುವುದನ್ನು ಪತ್ತೆ ಹೆಚ್ಚಲು ವಲಯವಾರು ಮ್ಯಾಪಿಂಗ್ ಮಾಡಲು ಪಾಲಿಕೆ ನಿರ್ಧರಿಸಿದೆ. ಅದರಂತೆ ಆ್ಯಪ್ ಮೂಲಕ ಮ್ಯಾಪಿಂಗ್ ಕೆಲಸ ಪ್ರಗತಿಯಲ್ಲಿದ್ದು, ಇನ್ನೇನು ಕೆಲ ದಿನಗಳಲ್ಲೇ ಪೂರ್ಣಗೊಳ್ಳಲಿದೆ. ಈ ಪ್ರದೇಶಗಳಲ್ಲಿ ರಾಜಕಾಲುವೆಗಳಿಂದ ಹೂಳು ತೆಗೆಯುವುದು, ಕೆಲವು ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ಸೇರಿದಂತೆ ವಿಶೇಷ ನಿಗಾ ವಹಿಸಲಾಗುತ್ತದೆ. ಕಳೆದ ವರ್ಷವೂ ಮಳೆಗಾಲಕ್ಕೂ ಮುನ್ನ ಇದೇ ರೀತಿ ಮ್ಯಾಪಿಂಗ್ ಕೆಲಸ ನಡೆದಿತ್ತು. ಈ ಕಾರ್ಯದಿಂದ ನೆರೆ ಪೀಡಿತ ಪ್ರದೇಶಗಳನ್ನು ತಕ್ಷಣ ಗುರುತಿಸಲು, ತುರ್ತು ಕ್ರಮ ಕೈಗೊಳ್ಳಲು ಸಹಾಯವಾಗಲಿದೆ.
-----------
ಪ್ರತ್ಯೇಕ ಟಾಸ್ಕ್‌ಪೋರ್ಸ್ ರಚನೆ
ಸಂಭಾವ್ಯ ಅನಾಹುತಗಳನ್ನು ತಡೆಯಲು ಪಾಲಿಕೆ ನಗರದಲ್ಲಿ ಪ್ರತ್ಯೇಕ ಟಾಸ್ಕ್‌ಪೋರ್ಸ್ ರಚನೆ ಮಾಡಿದ್ದು, ವಾರ್ಡ್‌ಗೆ ಒಬ್ಬರಂತೆ ‘ಇನ್ಸಿಡೆಂಟ್ ಕಮಾಂಡರ್’ ನೇಮಕ ಕಾರ್ಯ ನಡೆಯುತ್ತಿದೆ. ವಾರ್ಡ್‌ವಾರು ಇನ್ಸಿಡೆಂಟ್ ಕಮಾಂಡರ್, ವಲಯವಾರು ಅರಣ್ಯ ಇಲಾಖೆ, ಮೆಸ್ಕಾಂ ಅಧಿಕಾರಿಗಳು, ಅಗ್ನಿಶಾಮಕ ಇಲಾಖೆ ಅಧಿಕಾರಿಗಳ ತಂಡ ರಚಿಸಲಾಗಿದೆ. ಪ್ರವಾಹ ಪರಿಹಾರ ಆಶ್ರಯ ಕೇಂದ್ರ ಗುರುತು ಮಾಡಲಾಗಿದೆ.
--------------
ಜಿಲ್ಲಾಧಿಕಾರಿಗಳ ಸೂಚನೆ ಸಂಭಾವ್ಯ ನೆರೆ ಪ್ರದೇಶ ಗುರುತು
ಮಂಗಳೂರಿನಲ್ಲಿ ಸಣ್ಣ ಮಳೆ ಬಂದರೆ ಸಾಕು ಹಲವು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಅನಾಹುತ ಸಂಭವಿಸುತ್ತದೆ. ಅದರಲ್ಲೂ 2018ರ ಮೇ 29 ರಂದು ಸುರಿದ ಮಹಾಮಳೆಗೆ ಮಂಗಳೂರು ನಗರವೇ ಸ್ತಬ್ದಗೊಂಡಿತ್ತು. ಬಳಿಕದ ವರ್ಷದ ಮಳೆಗಾಲದಲ್ಲಿಯೂ ಹಲವು ತಗ್ಗು ಪ್ರದೇಶಗಳು ಮುಳುಗಡೆಯಾಗಿತ್ತು. ಇದರಿಂದ ಪಾಲಿಕೆಗೆ ಅಪಾರ ನಷ್ಟ ಉಂಟಾಗುತ್ತಿದೆ. ಈ ಬಾರಿ ಈ ರೀತಿಯ ಅಪಾಯ ತಪ್ಪಿಸಲು ‘ಇನ್ಸಿಡೆಂಟ್ ಕಮಾಂಡರ್’ ಸೇರಿದಂತೆ ಪ್ರತ್ಯೇಕ ಟಾಸ್ಕ್‌ಪೋರ್ಸ್ ನೇಮಕ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಸುರತ್ಕಲ್ ಬೈಲಾರೆ ಪ್ರದೇಶ, ಕೊಟ್ಟಾರ ಚೌಕಿ, ಜಪ್ಪಿನಮೊಗರು, ಪಂಪ್‌ವೆಲ್, ಸುಭಾಷ್‌ನಗರ-ಪಾಂಡೇಶ್ವರ, ಮಾಲೇಮಾರ್ ಪ್ರದೇಶಗಳನ್ನು ಸಂಭಾವ್ಯ ನೆರೆ ಬರುವ ಹೆಚ್ಚಿನ ಅಪಾಯದ ಪ್ರದೇಶ ಎಂದು ಗುರುತು ಮಾಡಲಾಗಿತ್ತು.
------------------
ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲದ ಸಮಯದಲ್ಲಿ ಉಂಟಾಗುವ ನೆರೆ, ಪ್ರಾಕೃತಿಕ ವಿಕೋಪ, ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಮುಂಜಾಗ್ರತಾ ಕ್ರಮವಾಗಿ ಪಾಲಿಕೆ ವ್ಯಾಪ್ತಿಯ ನೆರೆಪೀಡಿತ ಪ್ರದೇಶ ಆ್ಯಪ್ ಮೂಲಕ ಮ್ಯಾಪಿಂಗ್ ಮಾಡುವ ಕಾರ್ಯ ನಡೆಯುತ್ತಿದೆ. ಮಳೆಯ ಸಂದರ್ಭ ಸಂಭವಿಸುವ ಅನಿರೀಕ್ಷಿತ ಅನಾಹುತಗನ್ನು ಎದುರಿಸಲು ಇದು ಸಹಕಾರಿಯಾಗಲಿದೆ.
- ರವಿಚಂದ್ರ, ಪಾಲಿಕೆ ಆಯುಕ್ತರು