ಜಿಲ್ಲೆ

ರೋಬಾಟಿಕ್, ಸ್ಟೀರಿಯೊಟಾಕ್ಟಿಕ್ ಥೆರಪಿ ಶಿಕ್ಷಣ: ಅಪೊಲೋ ಕ್ಯಾನ್ಸರ್ ಕೇಂದ್ರದಿಂದ ಆರಂಭ

ಬೆಂಗಳೂರು: ಕ್ಯಾನ್ಸರ್ ತಜ್ಞರಿಗೆ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ಕುರಿತು ತರಬೇತಿ ನೀಡುವ ಸಲುವಾಗಿ ವಿಕಿರಣ ಚಿಕಿತ್ಸಾ ಸಾಧನಗಳ ಜಾಗತಿಕ ಪೂರೈಕೆದಾರ ಅಕ್ಯೂರೆ ಸಹಯೋಗದಲ್ಲಿ ಅಪೊಲೊ ಕ್ಯಾನ್ಸರ್ ಕೇಂದ್ರ (ಎಸಿಸಿ) ಭಾರತದಲ್ಲೇ ಮೊದಲ ಬಾರಿಗೆ ರೋಬಾಟಿಕ್ ಮತ್ತು ಸ್ಟೀರಿಯೊಟಾಕ್ಟಿಕ್ ಥೆರಪಿ ಶಿಕ್ಷಣ ಕೇಂದ್ರ ಆರಂಭಿಸಿದೆ.

ನೂತನ ‘ದಿ ಇಂಡಿಯನ್ ಸ್ಕೂಲ್ ಆಫ್ ರೋಬಾಟಿಕ್ ಆ್ಯಂಡ್ ಸ್ಟೀರಿಯೊಟಾಕ್ಟಿಕ್ ರೇಡಿಯೋ ಸರ್ಜರಿ ಶಿಕ್ಷಣ ಕೇಂದ್ರ’ವು ಬೆಂಗಳೂರು ಮತ್ತು ಚೆನ್ನೈ ಅಪೊಪೋ ಕ್ಯಾನ್ಸರ್ ಕೇಂದ್ರಗಳಲ್ಲಿ ಆರಂಭಗೊಳ್ಳಲಿವೆ. ಈ ಕೇಂದ್ರಗಳ ಮೂಲಕ ವಿಕಿರಣ ಆಂಕಾಲಾಜಿಸ್ಟ್‌ಗಳು, ಭೌತಶಾಸಜ್ಞರು, ವಿಕಿರಣ ಚಿಕಿತ್ಸಕರು ಹಾಗೂ ದೇಶಾದ್ಯಂತ ಇರುವ ತಂತ್ರಜ್ಞರಿಗೆ ಸುಧಾರಿತ ರೇಡಿಯೋ ಸರ್ಜರಿ ಕುರಿತು ಶೈಕ್ಷಣಿಕ ತರಬೇತಿ ನೀಡಲಾಗುವುದು ಎಂದು ಅಪೊಲೋ ಆಸ್ಪತ್ರೆಯ ಸಮೂಹದ ಅಧ್ಯಕ್ಷ ದಿನೇಶ್ ಮಾಧವನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದು ಮೂರು ದಿನಗಳ ತರಬೇತಿಯಾಗಿದ್ದು, ತರಬೇತಿ ಜತೆಗೆ ಸಮಗ್ರ ಚರ್ಚೆ ನಡೆಯಲಿದ್ದು, ಪ್ರಾತ್ಯಕ್ಷಿಕೆ ಇರಲಿದೆ. ಈ ಉಪಕ್ರಮವು ಭಾರತದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದರಿಂದ ಸ್ಥಳೀಯವಾಗಿ ವಿಶ್ವ ದರ್ಜೆಯ ತರಬೇತಿ ಲಭ್ಯವಾಗಲಿದ್ದು, ನಂತರದಲ್ಲಿ ರೋಗಿಗಳಿಗೆ ಅತಿ ಕಡಿಮೆ ದರದಲ್ಲಿ ಕಡಿಮೆ ಅವಧಿಯ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ನೀಡಬಹುದಾಗಿದೆ ಎಂದರು.

ಆಸ್ಪತ್ರೆಯ ಸೈಬರ್‌ನೈಫ್ ರೋಬಾಟಿಕ್ ರೇಡಿಯೋ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಪಿ.ಎಸ್. ಶ್ರೀಧರ್ ಮಾತನಾಡಿ, ಕ್ಯಾನ್ಸರ್ ರೋಗಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ಕುರಿತು ಕೌಶಲ ಮತ್ತು ಜ್ಞಾನ ಹೆಚ್ಚಿಸಿಕೊಳ್ಳಲು ಈ ತರಬೇತಿ ಸಹಕಾರಿಯಾಗಿದೆ. ಇದರಲ್ಲಿ ಸೈಬರ್‌ನೈಫ್ ಕುರಿತಾಗಿಯೂ ಮಾಹಿತಿ ನೀಡಲಾಗುವುದು. ಈ ವಿಧಾನದಿಂದ ಶಸಚಿಕಿತ್ಸೆ ನಡೆಸಲಾಗದ ದೇಹದ ಭಾಗಗಳಿಗೂ ಸೈಬರ್‌ನೈಫ್ ರೋಬಾಟಿಕ್ ಸುಲಭವಾಗಿ ತಲುಪಿ ಚಿಕಿತ್ಸೆ ನೀಡಲಿದೆ. ಈ ವಿಧಾನ ಬಳಸಿ ಈವರೆಗೂ 6 ಸಾವಿರಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜತೆಗೆ ಅವರ ಜೀವಿತಾವಧಿಯನ್ನು ಹೆಚ್ಚಿಸಲಾಗಿದೆ ಎಂದು ವಿವರಿಸಿದರು.

ಅಕ್ಯೂರೇ ಅಧ್ಯಕ್ಷ ಮತ್ತು ಸಿಇಒ ಸುಝೇನ್ ವಿಂಟರ್ ಮಾತನಾಡಿ, ಕ್ಯಾನ್ಸರ್ ಆರೈಕೆ ಹೆಚ್ಚಿಸಲು ಹಾಗೂ ನಿಖರತೆಯೊಂದಿಗೆ ಉತ್ತಮ ಲಿತಾಂಶದ ಚಿಕಿತ್ಸೆ ನೀಡಲು ಸೈಬರ್‌ನೈಫ್ ಪರಿಣಾಮಕಾರಿ ವಿಧಾನವಾಗಿದೆ. ಸಾಮಾನ್ಯ ರೇಡಿಯೋ ಥೆರಪಿಯಿಂದ ಉಂಟಾಗುವ ಅಡ್ಡ ಪರಿಣಾಮಗಳು ಈ ವಿಧಾನದಲ್ಲಿ ಕಡಿಮೆ ಇದೆ. ಜತೆಗೆ ಚಿಕಿತ್ಸೆ ಅವಧಿಯನ್ನು ತಗ್ಗಿಸಿ ಗಮನಾರ್ಹ ಪ್ರಗತಿ ಸಾಧ್ಯವಾಗಲಿದೆ. ಕ್ಯಾನ್ಸರ್ ಗಡ್ಡೆಗೆ ಚಿಕಿತ್ಸೆ ನೀಡಲೆಂದೇ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಸುಧಾರಿತ ಇಮೇಜಿಂಗ್ ಮತ್ತು ಗಣಕೀಕೃತ ರೋಬಾಟಿಕ್ಸ್ ಹೆಚ್ಚು ಕೇಂದ್ರೀಕೃತ ವಿಕಿರಣಗಳನ್ನು ತಲುಪಿಸಲು ಬಳಸಲಾಗುತ್ತದೆ ಎಂದು ಹೇಳಿದರು.