ಉಡುಪಿ: ಎಪಿಎಂಸಿ ರಕ್ಷಣಾ ಸಮಿತಿ ಅಶ್ರಯದಲ್ಲಿ ಉಡುಪಿ ಎಪಿಎಂಸಿ ಅಧಿಕಾರಿಗಳ ಅವ್ಯವಹಾರ ಮತ್ತು ಭ್ರಷ್ಟಾಚಾರ ಖಂಡಿಸಿ ನ.29ರಂದು ಬೆಳಗ್ಗೆ 10 ರಿಂದ ಆದಿಉಡುಪಿ ಎಪಿಎಂಸಿ ಪ್ರಾಂಗಣ ಮುಂಭಾಗ ಅಹೋರಾತ್ರಿ ಧರಣಿ ನಡೆಸಲು ಉದ್ದೇಶಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ , ನಗರಸಭಾ ಸದಸ್ಯ ವಿಜಯ ಕೊಡವೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೋಡೋನ್ ಬಾಡಿಗೆ ಪಡೆದ ವ್ಯಕ್ತಿ ಮೃತಪಟ್ಟು 3 ವರ್ಷವಾದರೂ ಗುತ್ತಿಗೆ ನವೀಕರಿಸದೆ ಅದೇ ವ್ಯಕ್ತಿಯ ಹೆಸರಿನಲ್ಲಿ ಬಾಡಿಗೆ ಪಡೆದು ಭ್ರಷ್ಟಾಚಾರ ನಡೆಸುತ್ತಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಉಡುಪಿ ಎಪಿಎಂಸಿಗೆ ಪ್ರತಿ ತಿಂಗಳು 12.5 ಲಕ್ಷ ರೂ. ಆದಾಯವಿದ್ದರೂ ಸರ್ಕಾರಕ್ಕೆ 4.5 ಲಕ್ಷ ಆದಾಯ ಎಂಬುದಾಗಿ ಸುಳ್ಳು ಮಾಹಿತಿ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಎಪಿಎಂಸಿಗೆ ಸೇರಿದ 11 ನಿವೇಶನಗಳನ್ನು ಅತೀ ಕಡಿಮೆ ದರಕ್ಕೆ ಮಾರಾಟಮಾಡಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಪ್ರಕರಣದ ಬಗ್ಗೆ ಜಿಪಂ ಸಿಇಒ ತನಿಖೆ ನಡೆಸುತ್ತಿದ್ದು, ಶ್ರೀ ವರದಿ ಬಿಡುಗಡೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಉಡುಪಿ ಎಪಿಎಂಸಿಯಲ್ಲಿ ಮೂಲ ಸೌಕರ್ಯ ಕೊರತೆ ಕಾಡುತ್ತಿದೆ. ರಸ್ತೆ, ವಿದ್ಯುತ್, ಶೌಚಾಲಯ, ನೀರು ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದರು.
ಕೃಷಿ ಉತ್ಪನ್ನ ಮಾರಾಟಗಾರರ ಒಕ್ಕೂಟ ಅಧ್ಯಕ್ಷ ಸುಭಾಷಿತ್ ಕುಮಾರ್, ಎಪಿಎಂಸಿ ಮಾಜಿ ಸದಸ್ಯ ರಮಾಕಾಂತ್ ಕಾಮತ್, ರಾವೇಂದ್ರ ಉಪ್ಪೂರು, ಯಾಜ್ ಅಹ್ಮದ್, ಪ್ರಭುಗೌಡ ಉಪಸ್ಥಿತರಿದ್ದರು.