ಉಡುಪಿ: ಎಪಿಎಂಸಿಯಲ್ಲಿ ಗೋಡೋನ್ ಬಾಡಿಗೆ ಪಡೆದ ವ್ಯಕ್ತಿ ಮೃತಪಟ್ಟು 3 ವರ್ಷವಾದರೂ ಗುತ್ತಿಗೆ ನವೀಕರಿಸದೆ ಅದೇ ವ್ಯಕ್ತಿಯ ಹೆಸರಿನಲ್ಲಿ ಬಾಡಿಗೆ ಪಡೆದು ಭ್ರಷ್ಟಾಚಾರ ನಡೆಸುತ್ತಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಕೃಷಿ ಉತ್ಪನ್ನ ಮಾರಾಟಗಾರರ ಒಕ್ಕೂಟ ಅಧ್ಯಕ್ಷ ಸುಭಾಷಿತ್ ಕುಮಾರ್ ಹೇಳಿದರು.
ಬುಧವಾರ ಆದಿಉಡುಪಿ ಎಪಿಎಂಸಿ ಪ್ರಾಂಗಣ ಮುಂಭಾಗ ಎಪಿಎಂಸಿ ರಕ್ಷಣಾ ಸಮಿತಿ ಅಶ್ರಯದಲ್ಲಿ ಎಪಿಎಂಸಿ ಅಧಿಕಾರಿಗಳನ್ನು ಅಮಾನತುಗೊಳಿಸಲು ಆಗ್ರಹಿಸಿ ನಡೆದ ಅಹೋರಾತ್ರಿ ಧರಣಿಯಲ್ಲಿ ಅವರು ಮಾತನಾಡಿದರು.
ಭ್ರಷ್ಟ ಅಧಿಕಾರಿಗಳು ಎಪಿಎಂಸಿಗೆ ಸೇರಿದ 11 ನಿವೇಶನಗಳನ್ನು ಅತೀ ಕಡಿಮೆ ದರಕ್ಕೆ ಮಾರಾಟಮಾಡಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ಈಗಾಗಲೇ ಒಪ್ಪಂದ ನೋಂದಣಿ ನಡೆದಿದ್ದು, 10 ವರ್ಷದ ಬಳಿಕ ಸರ್ಕಾರಿ ಭೂಮಿ ಖಾಸಗಿ ವ್ಯಕ್ತಿಗಳ ಪಾಲಾಗಲಿದೆ. ಈ ಪ್ರಕರಣದ ಬಗ್ಗೆ ಜಿಪಂ ಸಿಇಒ ತನಿಖೆ ನಡೆಸುತ್ತಿದ್ದು, 4 ತಿಂಗಳು ಕಳೆದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ಉಡುಪಿ ಎಪಿಎಂಸಿಗೆ ಪ್ರತಿ ತಿಂಗಳು 12.5 ಲಕ್ಷ ರೂ. ಆದಾಯವಿದ್ದರೂ ಸರ್ಕಾರಕ್ಕೆ 4.5 ಲಕ್ಷ ಆದಾಯ ಎಂಬುದಾಗಿ ಸುಳ್ಳು ಮಾಹಿತಿ ನೀಡಿ ಸರ್ಕಾರಕ್ಕೆ ವಂಚಿಸುತ್ತಿರುವ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು. ಎಪಿಎಂಸಿ ಪ್ರಾಂಗಣದಲ್ಲಿರುವ 169 ಕಟ್ಟೆಗಳನ್ನು ರಾತ್ರಿ ವೇಳೆ ಏಲಂ ನಡೆಸಲಾಗುತ್ತಿದ್ದು, ಕಟ್ಟೆಗೆ 250 ರೂ. ಶುಲ್ಕವಿದ್ದರೂ ಪ್ರತಿ ರೈತರಲ್ಲಿ 10 ರಿಂದ 20 ಸಾವಿರ ರೂ. ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಹಿರಿಯ ಸಾಮಾಜಿಕ ಕಾರ್ಯಕರ್ತ ದಿನೇಶ್ ಸಾಮಂತ್ ಪ್ರತಿಭಟನೆ ಉದ್ಘಾಟಿಸಿದರು. ನಗರಸಭಾ ಸದಸ್ಯರಾದ ವಿಜಯ ಕೊಡವೂರು, ಬಾಲಕೃಷ್ಣ ಶೆಟ್ಟಿ, ಪ್ರಭಾಕರ ಪೂಜಾರಿ, ಹರೀಶ್ ಶೆಟ್ಟಿ, ಎಪಿಎಂಸಿ ಮಾಜಿ ಸದಸ್ಯ ರಮಾಕಾಂತ್ ಕಾಮತ್, ರಾವೇಂದ್ರ ಉಪ್ಪೂರು, ಯಾಜ್ ಅಹ್ಮದ್, ಪ್ರಭುಗೌಡ, ರಾಧಾಕೃಷ್ಣ ಮೆಂಡನ್, ಮಹಿಳಾ ಮೋರ್ಚಾ ಜಿಲ್ಲಾಧ್ಯೆ ವೀಣಾ ಶೆಟ್ಟಿ, ಪಾಂಡುರಂಗ ಮಲ್ಪೆ, ವಿಜಯ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.