ಮುಂಡರಗಿ:ಸ್ಥಳೀಯ ಎಪಿಎಂಸಿಯಲ್ಲಿ ನಿರಂತರ ಕುಡಿಯುವ ನೀರು, ವಿದ್ಯುತ್ ದೀಪ, ರೈತಭವನ ಸೇರಿ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ವತಿಯಿಂದ ಮಂಗಳವಾರ ಎಪಿಎಂಸಿ ಕಾರ್ಯಾಲಯದ ಬಾಗಿಲು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಶಿವಾನಂದ ಇಟಗಿ ಮತ್ತು ರೈತ ಮುಖಂಡ ಚಂದ್ರಕಾಂತ ಉಳ್ಳಾಗಡ್ಡಿ ಮಾತನಾಡಿ, ಎಪಿಎಂಸಿಯಲ್ಲಿ ಮೂಲಸೌಕರ್ಯಗಳ ಕೊರತೆ ಹೆಚ್ಚಿದೆ. ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಫಸಲು ಮಾರಾಟಕ್ಕಾಗಿ ಬರುವ ರೈತರು ಕೆಲವೊಮ್ಮೆ ರಾತ್ರಿ ಮಾರುಕಟ್ಟೆಯಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಆದರೆ ವಸತಿಗೆ ವಸತಿ ವ್ಯವಸ್ಥೆ ಇಲ್ಲ. ರಾತ್ರಿ ಸಮಯದಲ್ಲಿ ಸರಿಯಾಗಿ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದಾಗಿದೆ ಎಂದು ದೂರಿದರು.
ವೇಬ್ರಿಡ್ಜ್ ವ್ಯವಸ್ಥೆ, ಹೈಮಾಸ್ಟ್ ದೀಪ, ರೈತಭವನ ವ್ಯವಸ್ಥೆ ಎಪಿಎಂಸಿಯಲ್ಲಿ ಇಲ್ಲದಾಗಿದೆ. ಇಂತಹ ಸಮಸ್ಯೆ ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುವ ಕೆಲಸ ಆಗಿಲ್ಲ. ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಪದೇಪದೆ ರಿಪೇರಿಗೆ ಬರುತ್ತಿದೆ. ಇದರಿಂದ ಅನೇಕ ಸಲ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಎಪಿಎಂಸಿಗೆ ಕೋಟಿಗಟ್ಟಲೆ ಸೆಸ್ ಪಾವತಿಸುತ್ತಿದ್ದರೂ ಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದರು.
ರೈತರಿಗೆ ವಿಶ್ರಾಂತಿ ಭವನದ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿರೂ ಆ ಕೆಲಸ ಆಗುತ್ತಿಲ್ಲ. ಈ ಎಲ್ಲ ಬೇಡಿಕೆಗಳನ್ನು ಶೀಘ್ರದಲ್ಲಿಯೇ ಈಡೇರಿಸದಿದ್ದರೆ ಬರುವ ದಿನಗಳಲ್ಲಿ ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಎಪಿಎಂಸಿ ಸಹ ಕಾರ್ಯದರ್ಶಿ ವಿ.ಜಿ. ಗಬ್ಬೂರ ಅವರು, ಈ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.
ರಾಘವೇಂದ್ರ ಕುರಿ, ಈರಣ್ಣ ಗಡಾದ, ವೈ.ಎಚ್. ಭಜಂತ್ರಿ, ಹುಚ್ಚಪ್ಪ ಹಂದ್ರಾಳ, ಅಂದಪ್ಪ ಕುರಿ, ಎಚ್.ಎಂ. ಕವಲೂರ, ಷಣ್ಮುಖಪ್ಪ ಹಾಳಕೇರಿ, ಅಂದಪ್ಪ ಹಂದ್ರಾಳ, ಅಣ್ಣಪ್ಪ ಡಂಬಳ, ಪ್ರಕಾಶ ದಳವಾಯಿ, ಈರಣ್ಣ ಸಂಧ್ಯಾಳ, ಮಂಜಪ್ಪ ಜೋಳದ, ಮಂಜಪ್ಪ ಹುಯಿಲಗೋಳ, ಭೀಮೇಶ ಬಂಡಿವಡ್ಡರ ಇತರರು ಇದ್ದರು.