ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆಗೆ ತಂದ ತಿದ್ದುಪಡಿ ಕೃಷಿ ಮಾರುಕಟ್ಟೆ ಸಮಿತಿಗಳ ಬುಡವನ್ನೇ ಅಲ್ಲಾಡಿಸಿದೆ. ಆಜ್ಞೆ ಜಾರಿಯಾದ ಕೆಲವೇ ತಿಂಗಳಲ್ಲಿ ನೂರಾರು ಮಾರುಕಟ್ಟೆಗಳು ಆರ್ಥಿಕ ಹೊಡೆತದಿಂದ ನಲುಗುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ರಾಜ್ಯದ 165 ಎಪಿಎಂಸಿಗಳ ಪೈಕಿ 20-30 ಉಳಿದರೆ ಅದೇ ಪವಾಡ ಎಂಬ ಸ್ಥಿತಿ ನಿರ್ಮಾಣವಾಗಿದೆ.
ರೈತರು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಸಮಿತಿಯಾಚೆ ಮಾರಲು ಸುಗ್ರಿವಾಜ್ಞೆ ದಾರಿ ಮಾಡಿಕೊಟ್ಟ ಕಾರಣ ಎಪಿಂಸಿಗೆ ಬರುತ್ತಿದ್ದ ಸೆಸ್‌ಗೆ ಬಹು ದೊಡ್ಡ ಹೊಡೆತ ಬಿದ್ದಿದೆ. ಈ ಮೊದಲಿದ್ದ ಎಪಿಎಂಸಿ ಸೆಸ್‌ನ್ನು ಸರ್ಕಾರ ಶೇ.1.50 ರಿಂದ ಶೇ. 0.35ಕ್ಕೆ ಇಳಿಸಿದ್ದು ಆದಾಯ ಕುಸಿತಕ್ಕೆ ಮೂಲ ಕಾರಣ. ಶೇ.0.35ರಲ್ಲಿ ಶೇ.14ರಷ್ಟು ಕೃಷಿ ಉತ್ಪನ್ನ ಸಮಿತಿಗಳಿಗೆ ಸಂದಾಯವಾದರೆ ಉಳಿದ ಮೊತ್ತ ಸರ್ಕಾರಕ್ಕೆ ಪಾವತಿಯಾಗುತ್ತದೆ. ಇದರಿಂದ ವಿದ್ಯುತ್ ಶುಲ್ಕ, ಸ್ವಚ್ಛತೆ, ಹೊರ ಗುತ್ತಿಗೆ ನೌಕರರ ವೇತನ, ಸಾಲದ ಕಂತು, ಆಸ್ತಿ ಕಂದಾಯ ಪಾವತಿ ಸಹಿತ ಸಣ್ಣಪುಟ್ಟ ವೆಚ್ಚಗಳಿಗೂ ಪರದಾಡಬೇಕಿದೆ.
ಕಳೆದ ವರ್ಷ 9.41 ಕೋಟಿ ರೂ. ಮಾರುಕಟ್ಟೆ ಸೆಸ್ ಸಂಗ್ರಹಿಸಿದ್ದ ಚಿತ್ರದುರ್ಗ ಎಂಪಿಎಂಸಿಗೆ ಕಳೆದ 3 ತಿಂಗಳಿಂದೀಚೆಗೆ ಆರ್ಥಿಕ ಹೊಡೆತ ಬಿದ್ದಿದೆ. 2005ರಲ್ಲಿ ಮಾಡಿದ್ದ 15.50 ಕೋಟಿ ರೂ. ಸಾಲಕ್ಕೆ ಈಗಾಗಲೇ 21 ಕೋಟಿ ರೂ. ಪಾವತಿಸಿದ್ದರೂ ಇನ್ನು 4 ಕೋಟಿ ರೂ. ಬಾಕಿ ಪಾವತಿಸಬೇಕಿದೆ. ಈ ಸಂಬಂಧ ಬ್ಯಾಂಕ್ ಅಧಿಕಾರಿಗಳ ತಂಡ ಮಂಗಳವಾರ ಮಾರುಕಟ್ಟೆ ಅಧಿಕಾರಿಗಳನ್ನು ಭೇಟಿ ಮಾಡಿ ಬಾಕಿ ಪಾವತಿಗೆ ಒತ್ತಾಯಿಸಿದೆ. 3 ತಿಂಗಳಿಗೊಮ್ಮೆ ಪಾವತಿಸಬೇಕಿರುವ ಸಾಲದ ಕಂತಿಗೂ ಹಣವಿಲ್ಲದಂತಾಗಿದೆ. ಚಿತ್ರದುರ್ಗ ಎಂಪಿಎಂಸಿ ವ್ಯಾಪ್ತಿಯಲ್ಲಿ ಭೀಮಸಮುದ್ರ ಹಾಗೂ ಭರಮಸಾಗರ ಉಪ ಮಾರುಕಟ್ಟೆಗಳಿವೆ. ಅಡಿಕೆ ವಹಿವಾಟಿಗೆ ಹೆಸರಾದ ಭೀಮಸಮುದ್ರದಲ್ಲೂ ಸೆಸ್ ಸಂಗ್ರಹ ಕುಸಿದಿದೆ.
ದುರ್ಗದ ಮಾರುಕಟ್ಟೆಗೆ ಆವಕ ಹೆಚ್ಚಳವಾಗಿದ್ದರೂ ಆದಾಯಕ್ಕೆ ಬೀಳುತ್ತಿರುವ ಪೆಟ್ಟು ಮಾತ್ರ ತಪ್ಪುತ್ತಿಲ್ಲ. 2019-20ನೇ ಅಕ್ಟೋಬರ್‌ಗೆ ಹೋಲಿಸಿದರೆ 2020-21ನೇ ಆರ್ಥಿಕ ಸಾಲಿನ ಅಕ್ಟೋಬರ್ ತಿಂಗಳೊಂದರ ಶುಲ್ಕ ಸಂಗ್ರಹದಲ್ಲಿ 18.17 ಲಕ್ಷ ರೂ. ಕುಸಿತವಾಗಿದೆ.
ಹಿಂದಿನ ಸಾಲಿನ ಸೆಸ್ ಸಂಗ್ರಹ-ಪ್ರಸಕ್ತ ಸಾಲಿನ ಸಂಗ್ರಹ (ಲಕ್ಷ ರೂ.)
ಏಪ್ರಿಲ್-38.95-43.73
ಮೇ-32-99-29.66
ಜೂನ್-34.65-47.70
ಜುಲೈ-54.90-32.36
ಆಗಸ್ಟ್-41.69-9.89
ಸೆಪ್ಟೆಂಬರ್-29.19-14.67
ಅಕ್ಟೋಬರ್-72.60-23.40
ನವೆಂಬರ್-1.49 ಕೋ.-0000
ಏಳು ವರ್ಷದ 20 ಲಕ್ಷ ರೂ. ಕಂದಾಯ ಬಾಕಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ನಗರಸಭೆ ಸ್ವಚ್ಛತೆ, ಬೀದಿ ದೀಪದ ಖರ್ಚಿನ ಹೊಣೆ ಹೊತ್ತರೆ ಅನುಕೂಲವಾಗುತ್ತದೆ. 32 ಸೆಕ್ಯುರಿಟಿಗಳ ಸಂಖ್ಯೆಯನ್ನು 16ಕ್ಕೆ, 8 ಡೆಟಾ ಆಪರೇಟರ್‌ಗಳ ಸಂಖ್ಯೆಯನ್ನು 4ಕ್ಕೆ ಇಳಿಸಲಾಗಿದೆ. ಸ್ವಚ್ಛತೆ ವೆಚ್ಚದ ಟೆಂಡರ್‌ನಲ್ಲೂ ಶೇ.25ನ್ನು ಕಡಿತಗೊಳಿಸಲಾಗಿದೆ. 1:3 ಅನುಪಾತದಂತೆ ಈ ಮೊದಲಿದ್ದ ದಂಡ ವಿಧಿಸುವ ಅಧಿಕಾರ ಈಗಿಲ್ಲವೆಂದು ಚಿತ್ರದುರ್ಗ ಎಪಿಎಂಸಿ ಜಂಟಿ ನಿರ್ದೇಶಕ ವಿ.ರಮೇಶ್ ತಿಳಿಸಿದ್ದಾರೆ.