ನಾಗಮಂಗಲ: ಪಠ್ಯದ ಜತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿಯೂ ಮಕ್ಕಳು ಪಾಲ್ಗೊಂಡರೆ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ್ ಸಲಹೆ ನೀಡಿದರು.
ತಾಲೂಕಿನ ದೇವಲಾಪುರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದೇವಲಾಪುರ ಹೋಬಳಿ ಮಟ್ಟದ ಕಲೋತ್ಸವ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಕಲಿಕೆ ಜತೆಯಲ್ಲಿ ಸಾಂಸ್ಕೃತಿಕ ಪ್ರತಿಭೆ ಅನಿವಾರ್ಯವಾಗಿದೆ. ಮಕ್ಕಳು ವ್ಯಾಸಂಗದ ಜತೆಯಲ್ಲಿ ಸಾಂಸ್ಕೃತಿಕ ಪ್ರತಿಭೆ ಬೆಳಕಿಗೆ ಬಂದಾಗ ಉತ್ಸಾಹ ಮತ್ತು ಪ್ರೋತ್ಸಾಹ ಮಕ್ಕಳಲ್ಲಿ ಕಲಿಕೆಯು ಪ್ರತಿಭೆಗೆ ಪೂರಕವಾಗುತ್ತದೆ. ಮಕ್ಕಳು ಗ್ರಾಮೀಣ ಭಾಗದ ಕಲಿಕೆಯ ಜತೆಯಲ್ಲಿಯೇ ಗ್ರಾಮೀಣ ಸೊಗಡಿನ ಕಲೆಗಳು ಹಾಡುಗಾರಿಕೆ, ರಂಗಗೀತೆ, ಚಿತ್ರಕಲೆ, ಅಭಿನಯ ಸೇರಿದಂತೆ ಮುಂತಾದ ಕಲೆಗಳನ್ನು ಸ್ವತಃ ಗ್ರಾಮಗಳಲ್ಲಿ ರೂಢಿಸಿಕೊಂಡು ಇಂತಹ ಸಂದರ್ಭಗಳನ್ನು ಬಳಸಿಕೊಳ್ಳುವ ಮೂಲಕ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಬೇಕಿದೆ. ಇಂತಹ ವೇದಿಕೆಗಳು ನಿಮ್ಮ ಭವಿಷ್ಯದ ಸಾಂಸ್ಕೃತಿಕ ಹೆಜ್ಜೆಗೆ ಪೂರಕವಾಗಿರುತ್ತದೆ. ಮಕ್ಕಳ ಓದುವ ಜತೆಗೆ ತಮ್ಮಲ್ಲಿರುವ ಕಲೆಗಳನ್ನು ಪ್ರದರ್ಶಿಸಲು ಇಂತಹ ವೇದಿಕೆಗಳನ್ನು ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ದೇವಲಾಪುರ ಹೋಬಳಿ ವ್ಯಾಪ್ತಿಯ 13 ಶಾಲೆಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕಲೋತ್ಸವದಲ್ಲಿ ಭಾಷಣ ಸ್ಪರ್ಧೆ, ರಂಗೋಲಿ, ಮಿಮಿಕ್ರಿ, ಜಾನಪದ ನೃತ್ಯ ಸೇರಿದಂತೆ 13ಕ್ಕೂ ಹೆಚ್ಚು ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ಶಿಕ್ಷಣ ಇಲಾಖೆಯ ಇಸಿಒ ಸಿದ್ದೇಶ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ವಹಿಸಿದ್ದರು. ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಜವರೇಗೌಡ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಾಸು, ಇಸಿಒ ಶಿವಕುಮಾರ್, ಮುಖ್ಯಶಿಕ್ಷಕ ಎನ್.ಸಿ.ಶಿವಕುಮಾರ್ ಇತರರಿದ್ದರು.