ಕಳಸದಲ್ಲಿ ಏರ್ಪಡಿಸಿದ್ದ ಪ್ರಚಾರ ರ‌್ಯಾಲಿಯಲ್ಲಿ ಜಯಪ್ರಕಾಶ್ ಹೆಗ್ಡೆ ಮಾತನಾಡಿದರು. ನಯನಾ ಮೋಟಮ್ಮ, ಕೆ.ಎ.ಶ್ರೇಣಿಕ್ ಇತರರಿದ್ದರು. 
ಜಿಲ್ಲೆ

ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ಫೋನ್ ಮಾಡಿ

ಜಿ.ಹೆಚ್. ಧನ್ಯಕುಮಾರ್

ಕಳಸ: ಯಾರದೋ ಹೆಸರಲ್ಲಿ ಮತವನ್ನು ಬೇಡಿ, ಗೆದ್ದು ಬಳಿಕ 5 ವರ್ಷದ ನಂತರ ನಿಮ್ಮ ಬಳಿಗೆ ಬರುವ ವ್ಯಕ್ತಿ ನಾನಲ್ಲ. ಜನಪರ ಕೆಲಸ ಮಾಡುವ ಭರವಸೆಯೊಂದಿಗೆ ನಿಮ್ಮ ಮತ ಕೇಳುತ್ತಿದ್ದೇನೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಪಟ್ಟಣದಲ್ಲಿ ಸಂಜೆ ಏರ್ಪಡಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರದ ದುರಾಡಳಿತ ಹಾಗೂ ಅಭಿವೃದ್ಧಿ ಕಾರ್ಯ ಶೂನ್ಯವೆಂದು ಅವರ ಪಕ್ಷದವರೆ ಗೋ ಬ್ಯಾಕ್ ಶೋಭಾ ಎಂದು ಇಲ್ಲಿಂದ ಓಡಿಸಿದ್ದಾರೆ. ಇದರಿಂದ ಬಿಜೆಪಿ ಅವರಿಗೆ ಜನರ ಬಳಿ ಹೋಗಿ ಮತ ಕೇಳಲು ಅಂಜಿಕೆ ಉಂಟಾಗಿದೆ. ಯಾವುದೇ ಅಭಿವೃದ್ಧಿ ಹಾಗೂ ಜನಪರ ಯೋಜನೆ ರೂಪಿಸದೆ, ಕೇವಲ ಮೋದಿ ಹೆಸರೇಳಿಕೊಂಡು ಪುನಃ ಮತ ಕೇಳಿದರೆ ಜನ ಬೆಂಬಲಿಸುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ ಎಂದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜನರು ಆರೋಗ್ಯ ಸಮಸ್ಯೆಯಿಂದ ನನಗೆ ಅನೇಕ ಫೋನ್ ಮಾಡುತ್ತಾರೆ. ಅವರು ಹಣಕಾಸಿನ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕಷ್ಟ ಪಡುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಆದ್ಯತೆ ನೀಡುತ್ತೇನೆ. ನಿಮ್ಮ ಊರಿನ ಕೆಲಸ, ಸಮಸ್ಯೆ ಬಗ್ಗೆ ನನಗೆ ನೇರವಾಗಿ ಫೋನ್ ಮಾಡಿ. ನಿಮ್ಮ ಕೆಲಸ ಮಾಡಿಕೊಡಲು ಬದ್ಧವಾಗಿದ್ದೇನೆ ಎಂದು ಹೇಳಿದರು.
ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಒಬ್ಬರು ಹೇಳುತ್ತಾರೆ. ನಮ್ಮ ಮಹಿಳೆಯರಿಗೆ ಸ್ವಾತಂತ್ರೃ ಕೊಡಲು, ಅವರನ್ನು ಸ್ವಾವಲಂಬಿ ಮಾಡಲು ಅವರಿಗೆ ಯೋಗ್ಯತೆ ಇಲ್ಲ. ಕಾಂಗ್ರೆಸ್ ಪಕ್ಷ ಮಾಡಿ ತೋರಿಸಿದೆ. ಅವರಿಗೆ ಚುನಾವಣೆ ಸೋಲುವ ಭಯ ಉಂಟಾಗಿದೆ. ಇದಕ್ಕಾಗಿ ಅವರು ತನ್ನ ನಾಲಿಗೆಯನ್ನು ಹರಿ ಬಿಟ್ಟಿದ್ದಾರೆ. ಮಾತನಾಡುವುದಾದರೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿ, ಮಹಿಳೆಯರ ಬಗ್ಗೆ ಏಕೆ ಮಾತನಾಡ್ತೀರಾ. ಯಾರು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡ್ತಾರೋ ಅವರನ್ನು ಸೋಲಿಸಿ ಅವರಿಗೆ ಅಧಿಕಾರ ಇಲ್ಲದಾಗೆ ಮಾಡಲು ಎಲ್ಲರೂ ಒಟ್ಟಾಗಬೇಕು ಎಂದರು.
ಹಿಂದಿನ ಸಂಸದರು 10 ವರ್ಷದಲ್ಲಿ ಏನು ಮಾಡಿದ್ದಾರೆ ಎನ್ನುವ ಪಟ್ಟಿ ನೀಡಲಿ. ಶೋಭಾ ಕರಂದ್ಲಾಜೆ ಯಾವುದೇ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ಅವರ ವಿರುದ್ಧ ಗೋ ಬ್ಯಾಕ್ ಅಭಿಯಾನ ಮಾಡಿದ್ದು ಬಿಜೆಪಿ ಕಾರ್ಯಕರ್ತರೇ ಅಲ್ಲವೆ. ಬಿಜೆಪಿಯ ಹೊಸ ಅಭ್ಯರ್ಥಿ ಕೂಡ ಕೆಲಸ ಮಾಡುತ್ತಾರೆ ಎಂಬ ಭರವಸೆ ಇಲ್ಲ. ನಿಮಗೆ ಶೂನ್ಯ ಸಾಧನೆ ಮಾಡುವ ಬಿಜೆಪಿ ಸಂಸದರು ಬೇಕೋ? ಅಥವಾ ನಿಮ್ಮೆಲ್ಲರ ಕೆಲಸವನ್ನು ಪಟ್ಟಿ ಮಾಡಿಕೊಂಡು ಅನುಷ್ಠಾನ ಮಾಡುವ ಜಯಪ್ರಕಾಶ್ ಹೆಗ್ಡೆ ಬೇಕೋ? ಎಂದು ನೀವೇ ತೀರ್ಮಾನ ಮಾಡಿ ಎಂದು ಹೇಳಿದರು.
ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಶ್ರೇಣಿಕ್, ಜಿಲ್ಲಾಧ್ಯಕ್ಷ ಡಾ. ಅಂಶುಮಂತ್, ಮಾಜಿ ಸಚಿವೆ ಮೋಟಮ್ಮ, ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್, ಕಾಂಗ್ರೆಸ್ ವಕ್ತಾರ ಸುಧೀರ್‌ಕುಮಾರ್, ಮುಖಂಡರಾದ ರಾಜೇಂದ್ರ ಪ್ರಸಾದ್, ಮಹಮ್ಮದ್ ರಫೀಕ್, ವಿಶ್ವನಾಥ್, ವೀರೇಂದ್ರ, ಸುಜಿತ್ ಬೆಳ್ಳ, ಸುಧಾಕರ್ ಇತರರಿದ್ದರು.