ಪ್ರಯಾಗ: ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವವಾಗಿರುವ ಮಹಾಕುಂಭ ಮೇಳಕ್ಕೆ ಅದ್ಧೂರಿ ಚಾಲನೆ ದೊರೆತಿದ್ದು, ಪುಷ್ಯ ಮಾಸದ ಪವಿತ್ರ ಪೌರ್ಣಿಮೆಯಂದು ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಗಂಗಾಸ್ನಾನದೊಂದಿಗೆ 48 ದಿನಗಳ ಮಹಾಕುಂಭ ಅನುಷ್ಠಾನಕ್ಕೆ ಸೋಮವಾರ ಚಾಲನೆ ನೀಡಿದರು.
ಪ್ರಯಾಗದ ಧಾರಗಂಜ್ ಪ್ರದೇಶದ ದಶಾಶ್ವಮೇದ ಘಾಟ್‌ನಲ್ಲಿರುವ ಪ್ರಾಚೀನ ಕಾಶೀ ಜಂಗಮವಾಡಿ ಮಠದಿಂದ ಆಗಮಿಸಿದ ಜಗದ್ಗುರುಗಳು ಪವಿತ್ರ ಗಂಗಾನದಿಯಲ್ಲಿ ಪುಣ್ಯಸ್ನಾನವನ್ನು ಮಾಡಿ ನಂತರ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ಈ ವೇಳೆ ಆಶೀರ್ವಚನ ನೀಡಿದ ಜಗದ್ಗುರುಗಳು, 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭವು ಸಾಧು ಸಂತರೇ ಆಯೋಜಿಸುವ ಜಗತ್ತಿನ ಬೃಹತ್ ಉತ್ಸವ. ಈ ಮೇಳಕ್ಕೆ ಯಾರಿಗೂ ಯಾರೂ ಆಹ್ವಾನ ನೀಡುವುದಿಲ್ಲ. ಆದರೂ ಕೋಟ್ಯಾಂತರ ಭಕ್ತರು ಮಹಾಕುಂಭಕ್ಕೆ ಆಗಮಿಸುತ್ತಾರೆ. ಸಾಧು ಸಂತರ ಪಾಲಿನ ಅತ್ಯಂತ ಪವಿತ್ರ ಮತ್ತು ಭಕ್ತಿಯ ಮೇಳ ಇದಾಗಿದೆ ಎಂದರು.
ಹರ್ಯಾಣದ ವೀರಶೈವ ಜಂಗಮರಿಗೆ ಕುಂಭಮೇಳದಲ್ಲಿ ವಿಶೇಷ ಸ್ಥಾನವಿದ್ದು, ದಶಾನಾಮ್ನಾ ಅಖಾಡಕ್ಕೆ ಅವರೇ ಗುರುಗಳು. ಪೂರ್ವ ನಿಗದಿಯಂತೆ ಶಾಹಿ ಸ್ನಾನದಂದು ಮೊದಲು ಸ್ನಾನ ಮಾಡುವ ಅವಕಾಶ ಅಖಾಡದ ಜಂಗಮರಿಗೆ ಸಲ್ಲುತ್ತದೆ. ಅಂತಹ ಅನೇಕ ಅಖಾಡದ ಜಂಗಮರು ಪುಣ್ಯಸ್ನಾನದ ನಂತರ ಕಾಶೀ ಜಗದ್ಗುರುಗಳಿಂದ ಇಷ್ಟಲಿಂಗದೀಕ್ಷೆಯನ್ನು ಪಡೆದುಕೊಂಡು ಶಿವಪೂಜೆಯಲ್ಲಿ ಪಾಲ್ಗೊಂಡರು.
ಕುಂಭಮೇಳಕ್ಕೆ ಆಗಮಿಸುವ ಕರ್ನಾಟಕದ ಭಕ್ತರಿಗೆ ವಿಶೇಷ ಊಟ, ವಸತಿ ಸೌಕರ್ಯವನ್ನು ಕಲ್ಪಿಸಲಾಗಿದ್ದು, ಅನ್ನದಾನಕ್ಕೆ ಜಗದ್ಗುರುಗಳು ಚಾಲನೆ ನೀಡಿದರು.