ಜಿಲ್ಲೆ

ಡ್ಯಾನ್ಸ್ ಕ್ಲಾಸ್ ಉದ್ಘಾಟನೆಯಲ್ಲಷ್ಟೇ ಭಾಗವಹಿಸಿದ್ದು, ಡ್ರಗ್ಸ್ ಪಾರ್ಟಿಯಲ್ಲಲ್ಲ ಅಂದ್ರು ಅನುಶ್ರೀ

Dakshina Kannada

ಮಂಗಳೂರು: ಡ್ರಗ್ಸ್ ಸಾಗಾಟ ಆರೋಪದಲ್ಲಿ ಸಿಕ್ಕಿ ಬಿದ್ದ ಡ್ಯಾನ್ಸರ್ ಕಿಶೋರ್ ಅಥವಾ ತರುಣ್‌ರಾಜ್ ಜತೆ ನಾನು ಯಾವುದೇ ಪಾರ್ಟಿಯಲ್ಲಿ ಭಾಗವಹಿಸಿಲ್ಲ. ಅವರಿಬ್ಬರು 12 ವರ್ಷದ ಹಿಂದೆ 6 ತಿಂಗಳು ನನಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದರು. ಬಳಿಕ ತರುಣ್‌ರಾಜ್‌ನ ಡ್ಯಾನ್ಸ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅದಕ್ಕಿಂತ ಹೆಚ್ಚಿನ ಬಾಂಧವ್ಯ, ಯಾವುದೇ ಸಂಪರ್ಕ ಇಲ್ಲ ಎಂದು ನಟಿ, ನಿರೂಪಕಿ ಅನುಶ್ರೀ ಹೇಳಿದ್ದಾರೆ.

ಡ್ರಗ್ಸ್ ನಂಟು ಆರೋಪ ಹಿನ್ನೆಲೆಯಲ್ಲಿ ಶನಿವಾರ ಪಣಂಬೂರು ಎಸಿಪಿ ಕಚೇರಿಯಲ್ಲಿ ಮಂಗಳೂರು ನಗರ ಡಿಸಿಪಿ ವಿನಯ ಗಾಂವ್ಕರ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರಿಂದ ಮೂರುವರೆ ತಾಸು ವಿಚಾರಣೆಗೊಳಪಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪೊಲೀಸರು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸಿದ್ದೇನೆ. ಪಾರ್ಟಿಯಲ್ಲಿ ಭಾಗಿಯಾಗಿರುವ ವಿಚಾರಕ್ಕೆ ಸಂಬಂಧಿಸಿ ನನ್ನನ್ನು ವಿಚಾರಣೆಗೆ ಕರೆದಿಲ್ಲ. ಅವರು ನನ್ನ ಡ್ಯಾನ್ಸ್ ಕೊರಿಯೋಗ್ರಾಫರ್ ಆದ ಕಾರಣ ವಿಚಾರಣೆಗೆ ಕರೆದಿದ್ದಾರೆ. ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ. ಶುಕ್ರವಾರ ವಿಚಾರಣೆಗೆ ಹಾಜರಾಗದ ಕುರಿತು ಪ್ರತಿಕ್ರಿಯಿಸಿ, ಶನಿವಾರ ಬೆಳಗ್ಗೆ ವಿಚಾರಣೆ ಇದ್ದ ಕಾರಣ ನಾನು ಶುಕ್ರವಾರ ಬೆಂಗಳೂರಿನಿಂದ ಇಲ್ಲಿಗೆ ಹೊರಟು ಬಂದಿದ್ದು, ಹೇಳಿದ ಸಮಯಕ್ಕೆ ಹಾಜರಾಗಿದ್ದೇನೆ ಎಂದರು.

ವಿಚಾರಣೆ ಮುಗಿದ ಬಳಿಕ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಆಯುಕ್ತ ವಿಕಾಶ್ ಕುಮಾರ್ ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ನಂತರ ಬೆಂಗಳೂರಿಗೆ ವಾಪಸ್ಸಾದರು.

ಎರಡು ಮೊಬೈಲ್ ಪರಿಶೀಲನೆ

ವಿಚಾರಣೆ ವೇಳೆ ಪೊಲೀಸರು ಅನುಶ್ರೀ ಅವರಲ್ಲಿದ್ದ ಎರಡು ಮೊಬೈಲ್‌ಗಳನ್ನು ಪಡೆದು, ಬಂಧಿತರೊಂದಿಗೆ ಸಂಪರ್ಕ ಇಟ್ಟುಕೊಂಡ ಬಗ್ಗೆ ಏನಾದರೂ ಸಾಕ್ಷ್ಯ ಇದೆಯೇ ಎಂದು ಪರಿಶೀಲಿಸಿದರು. ತರುಣ್‌ನನ್ನು ವಿಚಾರಣೆ ನಡೆಸಿದಾಗ ಆತ ಬೆಂಗಳೂರಿನಲ್ಲಿ ಹಲವು ಪಾರ್ಟಿಗಳನ್ನು ನಡೆಸಿದ್ದಾಗಿಯೂ, ಅದರಲ್ಲಿ ಅನುಶ್ರೀ ಭಾಗವಹಿಸಿದ್ದಾಗಿಯೂ ಬಾಯಿ ಬಿಟ್ಟಿದ್ದ. ಒಟ್ಟು ಪ್ರಕರಣದ ಕುರಿತು 40ರಿಂದ 50 ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಅನುಶ್ರೀಗೆ ಕೇಳಿದ್ದು, ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಕಿಶೋರ್ ಮತ್ತು ತರುಣ್‌ರಾಜ್ ಜತೆಗಿನ ಇತ್ತೀಚಿನ ಸಂಪರ್ಕದ ಬಗ್ಗೆ ಸೂಕ್ತ ಉತ್ತರ ನೀಡದೆ ಎಲ್ಲವನ್ನೂ ನಿರಾಕರಿಸಿದ್ದಾರೆ. ಆಗಾಗ ಮಂಗಳೂರಿಗೆ ಬಂದು ಹೋಗುತ್ತಿದ್ದ ಬಗ್ಗೆಯೂ ಸಮರ್ಪಕ ಉತ್ತರ ನೀಡಿಲ್ಲ. ಆರೋಪಿ ಡ್ಯಾನ್ಸರ್‌ಗಳಿಬ್ಬರ ಜತೆ ಮಾತ್ರವಲ್ಲದೆ, ಸ್ಯಾಂಡಲ್‌ವುಡ್ ಡ್ರಗ್ಸ್ ಲಿಂಕ್ ಬಗ್ಗೆಯೂ ತನಿಖಾಧಿಕಾರಿಗಳು ಪ್ರಶ್ನಿಸಿದ್ದು, ಅದನ್ನೂ ಅನುಶ್ರೀ ನಿರಾಕರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೇಳಿಕೆ ಆಧರಿಸಿ ಮುಂದಿನ ತನಿಖೆ: ಕಿಶೋರ್ ಮತ್ತು ತರುಣ್‌ರಾಜ್ ನೀಡಿದ ಹೇಳಿಕೆಯಂತೆ ಅನುಶ್ರೀಗೆ ನೋಟಿಸ್ ನೀಡಲಾಗಿತ್ತು. ಆಕೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಹೇಳಿಕೆಯನ್ನು ಆಧರಿಸಿ ಮುಂದಿನ ತನಿಖೆ ನಡೆಯಲಿದೆ. ಮತ್ತಷ್ಟು ಮಾಹಿತಿ ಬೇಕಾದರೆ ಮತ್ತೆ ನೋಟಿಸ್ ನೀಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ತಿಳಿಸಿದ್ದಾರೆ.

ಡ್ರಗ್ಸ್ ಮಹಾಮಾರಿ ದೊಡ್ಡ ಪಿಡುಗು. ಇದರ ನಿರ್ಮೂಲನೆಗೆ ಪೊಲೀಸರು ಕೈಗೊಂಡ ಕಾರ್ಯಾಚರಣೆಯಿಂದ ಕೆಲವರಿಗೆ ತೊಂದರೆಯಾಗಿರಬಹುದು. ಈ ದೇಶದ ನಾಗರಿಕರಾಗಿ ತನಿಖೆಗೆ ಸಹಕರಿಸಿ ನಾವೆಲ್ಲ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ಮಾಡಬೇಕು.

-ಅನುಶ್ರೀ, ನಿರೂಪಕಿ