ಬೆಳಗಾವಿ: ಶರಣರ ಅನುಭಾವದ ಪ್ರವಚನದ ನುಡಿಗಳು ಮನಸ್ಸಿನಲ್ಲಿನ ದುಃಖ, ದೋಷ, ಆಸೆ, ಆಮಿಷ ಸೇರಿದಂತೆ ಅರಿಷಡ್ ವರ್ಗಗಳನ್ನು ದೂರಗೊಳಿಸಿ ಮನಸ್ಸನ್ನು ಪರಿಶುದ್ಧಗೊಳಿಸುತ್ತವೆ. ಲೌಕಿಕ ಸುಖ ಅಲ್ಪಸುಖವಾದರೆ ಅನುಭಾವದಿಂದ ದೊರೆತ ಸುಖ ಶಾಶ್ವತವಾದದ್ದು. ಇದು ವ್ಯಕ್ತಿಗೆ ತಾನು ಯಾರೆಂಭುದನ್ನು ತಿಳಿಸುತ್ತದೆ. ಏಕೆಂದರೆ ಅನುಭಾವ ಎಂಬುದು ಆತ್ಮದ ವಿದ್ಯೆಯಾಗಿದೆ ಎಂದು ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಶಿವಬಸವ ನಗರದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಆರ್. ಎನ್. ಶೆಟ್ಟಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಡಾ. ಶಿವಬಸವ ಮಹಾಸ್ವಾಮಿಗಳವರ 135ನೇ ಜಯಂತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಶರಣರ ಅನುಭವಾಮೃತ ಪ್ರವಚನ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಬಂಡವಾಳಶಾಹಿಗಳು ಈ ಜನ್ಮದಲ್ಲಿ ದುಡಿದರೆ ಮುಂದಿನ ಜನ್ಮದಲ್ಲಿ ಅದರ ಫಲ ದೊರೆಯುತ್ತದೆ ಎಂದು ಧರ್ಮ, ದೇವರು ಹಾಗೂ ಪುನರ್ಜನ್ಮದ ಹೆಸರಿನಲ್ಲಿ ಜನರ ಶೋಷಣೆ ಮಾಡುತ್ತಿದ್ದರು. ಆದರೆ ಬಸವಾದಿ ಶರಣರು ಈ ಶೋಷಣೆಯನ್ನು ತಡೆಗಟ್ಟಿ ಗುರು, ಲಿಂಗ, ಜಂಗಮ, ಭಕ್ತ ಸೇರಿದಂತೆ ಎಲ್ಲರೂ ಸತ್ಯ ಶುದ್ಧವಾದ ಕಾಯಕ ಮಾಡಬೇಕು. ದುಡಿದು ತಿನ್ನದವರು ಭಕ್ತರೇ ಅಲ್ಲ ಎಂದು ತಿಳಿಸುತ್ತಾ ಶ್ರಮ ಸಂಸ್ಕೃತಿಯನ್ನು ಪರಿಚಯಿಸಿ ಮಾನವ ಬದುಕನ್ನು ಹಸನುಗಳಿಸುವ ಕಾರ್ಯ ಮಾಡಿದರು ಎಂದರು.
ಮಣಕವಾಡ ದೇವಮಂದಿರದ ಅಭಿನವ ಮೃತ್ಯುಂಜಯ ಸ್ವಾಮಿಜಿ ಮಾತನಾಡಿ, ಇತ್ತೀಚಿಗೆ ಕೆಲವು ಮಠಗಳು ಬಸವ ತತ್ವವನ್ನು ತೊಡುವ ಬಟ್ಟೆಯೆಂದು ಭಾವಿಸಿ, ಅಗತ್ಯವಿದ್ದಾಗ ಧರಿಸಿ ಅದನ್ನು ಬದಲಾಯಿಸುತ್ತಿರುತ್ತಾರೆ ಆದರೆ ನಾಗನೂರು ರುದ್ರಾಕ್ಷಿ ಮಠವು ಬಸವ ತತ್ವವನ್ನು ತನ್ನ ಅಂಗವೆಂದು ಭಾವಿಸಿ, ನಿತ್ಯ ಅದರ ಅನುಷ್ಠಾನದಲ್ಲಿ ಕಾರ್ಯತತ್ಪರವಾಗಿದೆ ಎಂದರು.
ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಜಿ, ತೋಂಟದಾರ್ಯ ವಿರಕ್ತಮಠ ಅರಳಿಕಟ್ಟಿಯ ಶಿವಮೂರ್ತಿ ಮಹಾಸ್ವಾಮಿಗಳು, ಜುಂಜರವಾಡದ ಬಸವರಾಜ ಶರಣರು ಉಪಸ್ಥಿತರಿದ್ದರು.