ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಸಮೀಪದ ಮೂಗೇನಹಳ್ಳಿ ಗೇಟಿನ ಬಳಿ ಕಸ ಘಟಕ ವಿರೋಧಿಸಿ ಅಹೋರಾತ್ರಿ ಧರಣಿ ಅಂತ್ಯಗೊಳ್ಳುವ ಲಕ್ಷಣ ಕಂಡುಬರುತ್ತಿಲ್ಲ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಬೇಕೆಂಬ ಹೋರಾಟಗಾರರ ಪಟ್ಟಿಗೆ ಮೊದಲ ಜಯಸಿಕ್ಕಂತಾಗಿದೆ. ಟೆರ‌್ರಾರ್ಮ ಪುನರಾರಂಭದ ವಿಷಯವಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಅವರ ತಾತ್ಕಾಲಿಕ ಪರಿಹಾರದ ಭರವಸೆ ನುಡಿ ಧರಣಿ ಮುಂದುವರಿಯುವಂತೆ ಮಾಡಿದೆ.
ಲಿಖಿತ ಭರವಸೆ ಬೇಕು: ಉಸ್ತುವಾರಿ ಸಚಿವರು ಭೇಟಿ ನೀಡಿ ಟೆರ‌್ರಾರ್ಮ ಪುನರಾರಂಭಿಸುವುದಿಲ್ಲ ಹಾಗೂ ಎಂಎಸ್‌ಜಿಪಿ ಘಟಕ ಬಂದ್ ಮಾಡಲಾಗುವುದು ಎಂಬ ಭರವಸೆ ನೀಡುತ್ತಾರೆ ಎಂಬ ಧರಣಿನಿರತರ ನಿರೀಕ್ಷೆ ಸುಳ್ಳಾಗಿದೆ. ಟೆರ‌್ರಾರ್ಮ ಘಟಕ ಪುನರಾರಂಭದ ಬಗ್ಗೆ ಪರಿಶೀಲಿಸಲಾಗುವುದು, ಎಂಎಸ್‌ಜಿಪಿ ಘಟಕ ಸ್ಥಗಿತದ ಬಗ್ಗೆ ಸಿಎಂ ಸಭೆ ಆಯೋಜಿಲಾಗುವುದು ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಇದರಿಂದ ನಮಗೆ ಶಾಶ್ವತ ಪರಿಹಾರ ಸಿಕ್ಕಂತಾಗಿಲ್ಲ. ಸಿಎಂ ಲಿಖಿತ ಭರವಸೆ ನೀಡುವವರೆಗೆ ಆಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದು ಕಸ ಘಟಕ ವಿರೋಧಿ ಸಮಿತಿ ಸ್ಪಷ್ಟಪಡಿಸಿದೆ.
ವಿಧಾನಸಭೆಯಲ್ಲಿ ಪ್ರಸ್ತಾಪ: ಸೋಮವಾರದ ವಿಧಾನಸಭೆಯಲ್ಲಿ ಕಸದ ಘಟಕದ ವಿಷಯ ಪ್ರಸ್ತಾಪಕ್ಕೆ ಅವಕಾಶ ದೊರೆತಿರಲಿಲ್ಲ. ಆದರೆ ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಶಾಸಕ ವೆಂಕಟರಮಣಯ್ಯ ಸ್ಪೀಕರ್ ಮುಂದೆ ಕಸದ ಘಟಕದ ವಿಷಯ ಪ್ರಸ್ತಾಪಿಸಿದ್ದರು. ಇದಕ್ಕೆ ಕೃಷ್ಣಬೈರೇಗೌಡ ಸಹ ದನಿಗೂಡಿಸಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡುವುದಾಗಿ ಉಸ್ತುವಾರಿ ಸಚಿವ ಆರ್.ಅಶೋಕ್ ತಿಳಿಸಿದ್ದರು. ಅದರಂತೆ ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್, ಮುಖ್ಯಮಂತ್ರಿ ಕಾರ್ಯದರ್ಶಿ ವಿಶ್ವನಾಥ್ ಹಾಗೂ ಕೆಲವು ಅಧಿಕಾರಿಗಳೊಂದಿಗೆ ಬುಧವಾರ ಕಸದ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮನವೊಲಿಕೆ ವಿಲ: ಟೆರ‌್ರಾರ್ಮವನ್ನು ಸದ್ಯಕ್ಕೆ ಪುನಾರಂಭಗೊಳಿಸುವುದಿಲ್ಲ, ಎಂಎಸ್‌ಜಿಪಿ ಘಟಕವನ್ನು ಹಂತಹಂತವಾಗಿ ಸ್ಥಗಿತಗೊಳಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಆರ್.ಅಶೋಕ್ ಧರಣಿನಿರತರ ಮನವೊಲಿಸುವ ಪ್ರಯತ್ನ ನಡೆಸಿದರು. ಅದರೆ ಇದಕ್ಕೆ ಸಮ್ಮತಿಸದ ಹೋರಾಟಗಾರರು, ಕೂಡಲೇ ಕ್ರಮಕೈಗೊಳ್ಳಬೇಕು, ಅಲ್ಲದೆ ಸರ್ಕಾರದಿಂದ ಲಿಖಿತ ಭರವಸೆ ದೊರೆಯಬೇಕು ಎಂದು ಪಟ್ಟು ಹಿಡಿದರು. ಎಲೆರಾಂಪುರದ ಕುಂಚಿಟಿಗರ ಮಠದ ಡಾ. ಹನುಮಂತನಾಥ ಸ್ವಾಮೀಜಿ, ಶಾಸಕ ವಿಶ್ವನಾಥ್, ಜೆಡಿಎಸ್ ಮುಖಂಡ ಮುನೇಗೌಡ ಸೇರಿದಂತೆ ನಾನಾ ಸಂಘಟನೆಗಳ ಮುಖಂಡರು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡಿಸಲಾಗುವುದು: ಕಸದ ಘಟಕದಿಂದ ಸ್ಥಳೀಯರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಲಾಗುವುದು.
ಎತ್ತಿನಹೊಳೆ ಯೋಜನೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಇದಕ್ಕಾಗಿ ಬಜೆಟ್‌ನಲ್ಲಿ 1500 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ಕೊರಟಗೆರೆ ಭಾಗಕ್ಕೆ ನೀರು ತರುವ ಯೋಜನೆ ಲಪ್ರದವಾಗಲಿದೆ ಎಂದು ಉಸ್ತುವಾರಿ ಸಚಿವ ಆರ್.ಅಶೋಕ್ ತಿಳಿಸಿದರು. ಟೆರ‌್ರಾರ್ಮ ಕಸ ಘಟಕ ಪುನರಾರಂಭದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಸಿಎಂ ಜತೆ ಚರ್ಚಿಸಲಾಗುವುದು. ಮುಖ್ಯಮಂತ್ರಿಗಳ ಬಳಿಯೇ ನಗರಾಭಿವೃದ್ಧಿ ಖಾತೆ ಇರುವುದರಿಂದ ಅಂತಿಮ ತೀರ್ಮಾನ ಅವರೇ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಬಿಬಿಎಂಪಿ ತ್ಯಾಜ್ಯ ಸಂಗ್ರಹಣಾ ಘಟಕ ವಿರೋಧಿ ಹೋರಾಟ ಸಮಿತಿ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಟೆರ‌್ರಾರ್ಮ ಘಟಕ ಮತ್ತೆ ಆರಂಭಗೊಳ್ಳಬಾರದು. ಹಾಗೆಯೇ ಎಂಎಸ್‌ಜಿಪಿ ಘಟಕ ಕೂಡಲೇ ಸ್ಥಗಿತಗೊಳಿಸಬೇಕು. ಈ ಬಗ್ಗೆ ಸರ್ಕಾರದಿಂದ ಸ್ಪಷ್ಟ ಆದೇಶ ಬರಬೇಕು. ವೆಂಕಟರಮಣಯ್ಯ, ಶಾಸಕ ದೊಡ್ಡಬಳ್ಳಾಪುರ ಇಲ್ಲಿನ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲೇಬೇಕು. ಕೇವಲ ಭರವಸೆ ನೀಡಿದರೆ ಸಾಲದು, ಇಲ್ಲಿನ ಹೋರಾಟಗಾರರು ಹಾಗೂ ಸ್ಥಳೀಯರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಹಾಗೂ ಎಲ್ಲ ರೀತಿಯ ಸಹಕಾರವೂ ಇದೆ. ಜಯಮ್ಮಲಕ್ಷ್ಮೀನಾರಾಯಣ್, ಜಿಪಂ ಅಧ್ಯಕ್ಷೆ ಕಸದ ಘಟಕ ಸ್ಥಗಿತದ ಬಗ್ಗೆ ಉಸ್ತುವಾರಿ ಸಚಿವರು ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ. ಸಿಎಂ ಸಭೆ ಆಯೋಜಿಸುವ ಬಗ್ಗೆ ಹೇಳಿದರೂ ದಿನಾಂಕ ಸ್ಪಷ್ಟಪಡಿಸಿಲ್ಲ. ಕಸದ ಸಮಸ್ಯೆ ಪರಿಹಾರದ ಬಗ್ಗೆ ಸರ್ಕಾರದಿಂದ ಲಿಖಿತ ಉತ್ತರ ಬರಬೇಕು, ಅಲ್ಲಿಯವರೆಗೆ ಹೋರಾಟ ಮುಂದುವರಿಯಲಿದೆ. ಶಶಿಧರ್, ತಾಪಂ ಅಧ್ಯಕ್ಷ