ಜಿಲ್ಲೆ

ದೀನದಯಾಳ್‌ರ ತತ್ವಾದರ್ಶ ಸರ್ವಕಾಲಕ್ಕೂ ಪ್ರಸ್ತುತ,ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಭಿಮತ

Chitradurga

ಚಿತ್ರದುರ್ಗ: ಅಪ್ರತಿಮ ರಾಷ್ಟ್ರಭಕ್ತರಾಗಿದ್ದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ತತ್ವಾದರ್ಶ ಸರ್ವಕಾಲಕ್ಕೂ ಪ್ರಸ್ತುತ. ಅವರು ನಡೆದುಬಂದ ಹಾದಿ ಯುವಸಮೂಹಕ್ಕೆ ದಾರಿದೀಪ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಲಹೆ ನೀಡಿದರು.

ಕ್ರೀಡಾಭವನದಲ್ಲಿ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ 106ನೇ ಜಯಂತಿ ಅಂಗವಾಗಿ ಅಂತ್ಯೋದಯ ವಿಕಾಸ ಟ್ರಸ್ಟ್‌ನಿಂದ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ ವಿಭಜನೆಯಾಗಲು ಮಾಜಿ ಪ್ರಧಾನಿ ನೆಹರು ಕಾರಣ. ಅವರೇ ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದರಿಂದ ಭಾರತೀಯರೇ ಹೋಗಲು ಈ ಮೊದಲು ಅನುಮತಿ ಪಡೆಯಬೇಕಿತ್ತು. ಪ್ರಧಾನಿ, ರಾಷ್ಟ್ರ ಧ್ವಜವೂ ಪ್ರತ್ಯೇಕವಾಗಿತ್ತು. ಅಂತಹ ಸ್ಥಳದಲ್ಲಿ ಭಾರತದ ಬಾವುಟ ಹಾರಿಸಿದ ಕೀರ್ತಿ ದೀನದಯಾಳ್‌ ಅವರಿಗೆ ಸಲ್ಲುತ್ತದೆ ಎಂದರು.

ಅಪ್ಪಟ ದೇಶಪ್ರೇಮಿಗಳಾದ ಶ್ಯಾಮ ಪ್ರಸಾದ ಮುಖರ್ಜಿ, ದೀನದಯಾಳ್‌ ಉಪಾಧ್ಯಾಯ, ಅಟಲ್‌ ಬಿಹಾರಿ ವಾಜಪೇಯಿ ರಾಷ್ಟ್ರದ ಏಳ್ಗೆಗಾಗಿ ಶ್ರಮಿಸಿದ ಮಹನೀಯರು. ಅವರಲ್ಲಿನ ಉತ್ತಮ ಗುಣಗಳನ್ನು ಯುವಸಮೂಹ ಜೀವನದಲ್ಲಿ ಅಳವಡಿಸಿಕೊಂಡರೆ ಭಾರತ ಮತ್ತಷ್ಟು ಪ್ರಜ್ವಲಿಸಲಿದೆ ಎಂದು ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಕೆ.ರಾಜೀವಲೋಚನ ಮಾತನಾಡಿ, ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರು ಸ್ವಾತಂತ್ರ ಪೂರ್ವ ಮತ್ತು ನಂತರ ದೇಶ ಮತ್ತು ಸಮಾಜದ ಬದಲಾವಣೆಗಾಗಿ ಶ್ರಮಿಸಿದ ಅಗ್ರಪಂಕ್ತಿಯ ನಾಯಕರಲ್ಲಿ ಒಬ್ಬರು. ಆರ್‌ಎಸ್‌ಎಸ್‌ ಸೇರಿದ ನಂತರ ಅಪ್ರತಿಮ ಸಂಘಟಕರಾದರು. ಅವರ ಇಡೀ ಜೀವನ ಸಂಘ ಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಮಾರ್ಗದರ್ಶನವಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.

ಕಡುಬಡತನದಲ್ಲಿ ಜನಿಸಿದ ಅವರು ನಾಲ್ಕನೇ ವಯಸ್ಸಿಗೆ ತಂದೆ, ಆರನೇ ವಯಸ್ಸಿಗೆ ತಾಯಿ, ಎಂಟನೇ ವಯಸ್ಸಿನಲ್ಲಿ ಅತ್ತೆಯನ್ನು ಕಳೆದುಕೊಂಡರು. ಮಾವನ ಆಶ್ರಯದಲ್ಲಿ ಬೆಳೆದರಾದರೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆಯಲು ಉತ್ತರಪ್ರದೇಶ, ರಾಜಸ್ತಾನದ 18 ಕಡೆ ಅಲೆದಾಡಬೇಕಾಯಿತು. ಬಾಲ್ಯದಲ್ಲೇ ಬಿರ್ಲಾ ಅವರಿಂದ ಚಿನ್ನದ ಪದಕ ಪಡೆದ ಪ್ರತಿಭಾವಂತರು ಹೌದು ಎಂದು ಹೇಳಿದರು.

ಉತ್ತಮ ರಾಷ್ಟ್ರ ನಿರ್ಮಾಣದ ಗುರಿಯೊಂದಿಗೆ ಸಾಗಿ, ಇಡೀ ಬದುಕನ್ನೇ ಸಮರ್ಪಿಸಿದ ಅವರು ಪ್ರಬುದ್ಧ ಲೇಖಕರು, ಪತ್ರಕರ್ತರು, ಕಾದಂಬರಿಕಾರರೂ ಹೌದು. ಪಾಂಚಜನ್ಯ, ಹಿಮಾಲಯ, ರಾಷ್ಟ್ರಧರ್ಮ ಎಂಬ ಪತ್ರಿಕೆಗಳನ್ನು ಹೊರತಂದರು. ಅವರ ಬರವಣಿಗೆ ಆಡಳಿತ ಪಕ್ಷವನ್ನೇ ನಡುಗಿಸುತ್ತಿತ್ತು. ಮಾಜಿ ಪ್ರಧಾನಿ ವಾಜಪೇಯಿ ಅವರ ವ್ಯಕ್ತಿತ್ವ ರೂಪುಗೊಳ್ಳಲು ಇವರೇ ಕಾರಣೀಭೂತರು ಎಂದು ಬಣ್ಣಿಸಿದರು.

ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಸೇರಿದಂತೆ ಅಖಂಡ ಭಾರತದ ಕನಸು ಕಂಡಿದ್ದ ಅವರ ಉದ್ದೇಶಗಳನ್ನು ಹಂತ ಹಂತವಾಗಿ ಈಡೇರಿಸುವಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಶ್ರಮಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಟ್ರಸ್ಟ್‌ನ ಅಧ್ಯಕ್ಷ ಎಸ್.ಸಿದ್ದೇಶ್‌ಯಾದವ್‌, ವಿಧಾನಪರಿಷತ್‌ ಸದಸ್ಯ ಕೆ.ಎಸ್.ನವೀನ್‌, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಪಿ.ಆರ್.ದಾಸ್‌ ಇತರರಿದ್ದರು.

ಮಹನೀಯರೆಲ್ಲರ ಹತ್ಯೆ ಅಮಾನವೀಯ ಗೂಂಡಾಗಳನ್ನು ಸಜ್ಜನರನ್ನಾಗಿ ಮಾಡಿ ಸನ್ಮಾರ್ಗದಲ್ಲಿ ನಡೆಡುವ ಶಕ್ತಿ, ಮಂತ್ರದಂಡ ದೀನದಯಾಳ್‌ ಅವರಲ್ಲಿತ್ತು. ಆದರೆ, ಯುಪಿಯ ಈ ಹಿಂದಿನ ಮೊಗಲ್‌ ಸರಾಯ್‌ ರೈಲ್ವೆ ನಿಲ್ದಾಣದ ಎರಡು ವಿದ್ಯುತ್‌ ಕಂಬಗಳ ನಡುವಿನ ಜಲ್ಲಿ ಕಲ್ಲಿನ ಮೇಲೆ ದುಷ್ಕರ್ಮಿಗಳು ಅಮಾನವೀಯವಾಗಿ ಹತ್ಯೆ ಮಾಡಿದ್ದರು. ದೇಶದ ಅನೇಕ ಮಹನೀಯರ ಹತ್ಯೆಗಳು ಇದಕ್ಕೆ ಹೊರತಾಗಿಲ್ಲ ಎಂದು ರಾಜೀವಲೋಚನ ವಿಷಾದಿಸಿದರು.