ಉಡುಪಿ: ಅವಿಭಜಿತ ದ.ಕ. ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಸ್ವರ್ಣಾ ನದಿಗಳ ನೀರಿನಲ್ಲಿ ಶೀತ, ಕೆಮ್ಮು, ಜ್ವರವಿದ್ದಾಗ ಔಷಧ ರೂಪದಲ್ಲಿ ಬಳಸುವ ಐದು ಬಗೆಯ ಆ್ಯಂಟಿಬಯೋಟಿಕ್ (ಪ್ರತಿಜೀವಕ) ಅಂಶಗಳು ಪತ್ತೆಯಾಗಿವೆ.
ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಕೇರಳ ಇರಿಂಞಾಲಕ್ಕುಡ ಕ್ರೈಸ್ಟ್ ಇಂಜಿನಿಯರಿಂಗ್ ಕಾಲೇಜು, ಕೆನಡಾ ವಾಟರ್‌ಲೂ ವಿವಿ, ಜಪಾನ್ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ನ ಐವರು ತಜ್ಞರ ತಂಡ ಕಳೆದ 6-7 ವರ್ಷಗಳಿಂದ ಈ ನದಿಗಳ ನೀರಿನ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ. ಈ ನದಿಗಳ ನೀರಲ್ಲಿ ಮನುಷ್ಯರಿಗೆ ದೀರ್ಘಾವಧಿಯಲ್ಲಿ ಹಾನಿಕಾರಕವಾದ ಟ್ರೈಮೆಥೋಪ್ರಿಂ, ಸಲ್ಫಾಮಿಥೋಕ್ಸಾಜ್ಹೋಲ್, ಕ್ಲೋರಾಮ್ಫೆನಿಕಾಲ್, ಸೆಫ್ಟ್ರಿಯಾಕ್ಸೋನ್, ನೆಪ್ರಾಕ್ಸಿನ್ ಎಂಬ ಅಂಶಗಳಿವೆ ಎಂಬುದು ತಿಳಿದುಬಂದಿದೆ.
ಸ್ವರ್ಣಾ ನದಿಯ ಬಜೆ ಡ್ಯಾಂನಿಂದ ಸಮುದ್ರಕ್ಕೆ ಸೇರುವವರೆಗಿನ 6 ಪ್ರದೇಶಗಳಲ್ಲಿ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ನೇತ್ರಾವತಿ ನದಿಯಲ್ಲಿ ತುಂಬೆ ಡ್ಯಾಂನಿಂದ ಬೋಳಾರ್‌ವರೆಗೆ 6 ಪ್ರದೇಶಗಳಲ್ಲಿ ಮಾದರಿ ಸಂಗ್ರಹಿಸಲಾಗಿದೆ. ಈ ಸಂದರ್ಭ ಸ್ವರ್ಣಾ ನದಿಗೆ ಹೋಲಿಸಿದರೆ ನೇತ್ರಾವತಿಯಲ್ಲಿ ಆ್ಯಂಟಿಬಯೋಟಿಕ್ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ.
ನದಿಗೆ ಸೇರಿದ್ದು ಹೇಗೆ? : ಆ್ಯಂಟಿಬಯೋಟಿಕ್ ಮಾತ್ರೆ ಸೇವಿಸುವವರ ಮೂತ್ರ, ಕೆಲವು ಸೋಪ್‌ಗಳು, ಹ್ಯಾಂಡ್‌ವಾಶ್‌ಗಳು, ಕ್ರಿಮಿನಾಶಕಗಳು, ಕಾರ್ಖಾನೆಗಳ ತ್ಯಾಜ್ಯ ನೀರು ನದಿಗೆ ಸೇರುವುದರಿಂದ ನೀರಿನಲ್ಲಿ ಈ ಅಂಶಗಳು ಪತ್ತೆಯಾಗಿವೆ. ಮಳೆಗಾಲಕ್ಕೆ ಹೋಲಿಸಿದರೆ ಬೇಸಗೆ ಕಾಲದಲ್ಲಿ ಆ್ಯಂಟಿ ಬಯೋಟಿಕ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿವೆ.
ನದಿಗಳಲ್ಲಿ ಪ್ರಸ್ತುತ ಆ್ಯಂಟಿಬಯೋಟಿಕ್ ಅಂಶಗಳು ಅಪಾಯಕಾರಿ ಮಟ್ಟವನ್ನು ತಲುಪಿಲ್ಲ. ಆದರೆ, ಜಲಚರಗಳಿಗೆ ಇದರಿಂದ ಹೆಚ್ಚಿನ ಹಾನಿಯಾಗುವ ಸಾಧ್ಯತೆಗಳಿವೆ. ಹೀಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ತ್ಯಾಜ್ಯ ನೀರನ್ನು ಶುದ್ಧೀಕರಿಸಿಯೇ ನದಿಗೆ ಬಿಡುವಂತೆ ಕ್ರಮಕೈಗೊಳ್ಳಬೇಕು. ಮುಂಬೈನ ಬಿಎಆರ್‌ಸಿಯಲ್ಲಿ ಆ್ಯಂಟಿಬಯೋಟಿಕ್ ರೇಡಿಯೇಶನ್ ಮೂಲಕ ತೆಗೆಯುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ನೀರಿನಿಂದ ದೇಹದ ಮೇಲೆ ಆಗುವ ಪರಿಣಾಮವನ್ನು ವೈದ್ಯರು ಪರೀಕ್ಷೆ ನಡೆಸಬೇಕು. - ಕೆ.ಬಾಲಕೃಷ್ಣ, ಪ್ರಾಧ್ಯಾಪಕ, ಭೂ ವಿಜ್ಞಾನ ವಿಭಾಗ, ಎಂಐಟಿ ಮಣಿಪಾಲ