ಜಿಲ್ಲೆ

ವಕ್ಫ್ ಬೋರ್ಡ್ ಕಾಯ್ದೆ ರದ್ದುಪಡಿಸಿ: ನಗರದಲ್ಲಿ ಪ್ರತಿಭಟನಾ ಮೆರವಣಿಗೆ

ಕೆ.ಎನ್.ರಾಘವೇಂದ್ರ

ಮಂಡ್ಯ: ವಕ್ಫ್ ಬೋರ್ಡ್ ಕಾಯ್ದೆ ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ವಕ್ಫ್ ವಿರೋಧಿ ರೈತ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಜಮಾಯಿಸಿದ ಭಾರತೀಯ ಕಿಸಾನ್ ಸಂಘ, ಹಿರಿಯ ನಾಗರಿಕ ಸಂಘ, ಕದಂಬಸೇನೆ, ಸ್ವಾಭಿಮಾನಿ ದಲಿತ ಸಂಘರ್ಷ ಸಮಿತಿ, ಬಜರಂಗ ಸೇನೆ, ಕಬ್ಬು ಬೆಳೆಗಾರರ ಸಂಘ, ಜೈಕರ್ನಾಟಕ, ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಜಿಲ್ಲಾ ಬ್ರಾಹ್ಮಣ ಸಂಘದ ನೇತೃತ್ವದ ಒಕ್ಕೂಟದ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆಯನ್ನು ಜಿಲ್ಲಾಧಿಕಾರಿ ಕಚೇರಿವರೆಗೂ ನಡೆಸಿ ಘೋಷಣೆ ಕೂಗಿದರು.

ರೈತರ ಜಮೀನಿನ ಪಹಣಿಯಲ್ಲಿ ನಮೂದಾದ ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿ ಎಂಬುದನ್ನು ಕೂಡಲೇ ತೆಗೆದು ಹಾಕಬೇಕು. ದೇವಸ್ಥಾನದ ಜಾಗಗಳು ವಕ್ಫ್ ಬೋರ್ಡ್‌ನಿಂದ ಮುಕ್ತ ಮಾಡಬೇಕು. ಗೋಮಾಳ, ಸಾರ್ವಜನಿಕ ಜಾಗಗಳು, ಮುಜರಾಯಿ ಇಲಾಖೆಗಳ ಆಸ್ತಿಗಳು, ಪಾರಂಪರಿಕ ತಾಣಗಳು, ಸರ್ಕಾರಿ ಕಚೇರಿಗಳು, ಸರ್ಕಾರಿ ಶಾಲೆಗಳು, ಅದಕ್ಕೆ ಸಂಬಂಧಪಟ್ಟಂತಹ ಜಾಗಗಳನ್ನು ವಕ್ಫ್ ಬೋರ್ಡ್‌ನಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ವಿಶ್ವ ಹಿಂದು ಪರಿಷತ್‌ನ ಭಾನುಪ್ರಕಾಶ ಶರ್ಮಾ ಮಾತನಾಡಿ, ರಾಜಕಾರಣಿಗಳು ವಕ್ಫ್ ಬೋರ್ಡ್‌ಗೆ ಗೋಮಾಳ ಸ್ಥಳ ಮತ್ತು ಸರ್ಕಾರಿ ಖಾಲಿ ಜಾಗ ನೀಡುತ್ತಿರುವುದು ಖಂಡನೀಯ. 2013ರಲ್ಲಿ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರು ಸರ್ಕಾರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ವಕ್ಫ್ ಬಿಲ್ ಪಾಸ್ ಮಾಡಿ ಅಧಿಕಾರದಿಂದ ಇಳಿಯುತ್ತಾರೆ. ಇದರಿಂದ ಎಲ್ಲರಿಗೂ ಅನಾನುಕೂಲವಾಗಿದೆ ಎಂದು ಆರೋಪಿಸಿದರು.

ದೇಶದ ಆಸ್ತಿಯ ಮೇಲೆ ಹಕ್ಕಿರುವುದು ಮಿಲಿಟರಿ ಹಾಗೂ ರೈಲ್ವೆಗೆ ಮಾತ್ರ. ಆದರೆ ದುರಂತವೆಂದರೆ ವಕ್ಫ್ ಮಂಡಳಿ ಮೂರನೇ ಸ್ಥಾನವಿದೆ. ಈ ಬಗ್ಗೆ ರೈತರು ಜಾಗೃತವಾಗಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಕ್ಫ್ ಕಾನೂನು ತಿದ್ದುಪಡಿ ಮಾಡಲು ಹೊರಟಿದ್ದಾರೆ. ಇದರಿಂದ ನಮಗೆ ಒಳಿತಾಗುತ್ತದೆ. ನಮಗೆ ಮುಸ್ಲಿಂ ಸಮುದಾಯದ ವಿರುದ್ಧ ಬೇಸರವಿಲ್ಲ. ಆದರೆ ಮತ ಬ್ಯಾಂಕಿಗಾಗಿ ಅವರಿಗೆ ವಿಶೇಷ ಕಾನೂನು ನೀಡುವುದು ಸರಿಯೇ ಎಂದು ಪ್ರಶ್ನಿಸಿದರು.

ಕೆ.ಆರ್.ಪೇಟೆ ತೆಂಡೆಕೆರೆ ಮಠದ ಚಂದ್ರಶೇಖರ್ ಸ್ವಾಮೀಜಿ ಮಾತನಾಡಿ, ಒಬ್ಬ ಭಸ್ಮಾಸುರನಿದ್ದ ಎಂದು ಹಿಂದೆ ಕಥೆಯಲ್ಲಿ ಕೇಳಿದ್ದೆವು. ಅದೇ ಮಾದರಿಯಲ್ಲಿ ವಕ್ಫ್ ಭಸ್ಮಾಸುರವಿದೆ. ಇದು ಎಲ್ಲಿ ಹೆಜ್ಜೆ ಇಡುತ್ತದೆಯೋ ಅಲ್ಲಿ ಅವರ ಪಾಲಾಗುತ್ತದೆ. ಆದರೆ ನಮ್ಮ ಪಾಲಿಗೆ ಅದು ಭಸ್ಮವಾದಂತೆ ಆಗುತ್ತದೆ. ಹಾಗಾಗಿ ಇದಕ್ಕೆ ಅವಕಾಶ ನೀಡದೇ ರೈತರು, ಜನರ ಉಳಿವಿಗಾಗಿ ವಕ್ಫ್ ವಿರುದ್ಧ ಹೋರಾಟ ಮಾಡಿ ನಮ್ಮ ಹಕ್ಕು ಪ್ರತಿಪಾದಿಸಬೇಕು. ಜತೆಗೆ ನಮ್ಮ ಭೂಮಿಯ ಹಕ್ಕನ್ನು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಭಾರತೀಯ ಕಿಸಾನ್ ಸಂಘದ ಪ್ರಾಂತ ಅಧ್ಯಕ್ಷ ಹಾಡ್ಯರಮೇಶ್ ರಾಜು ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳ ಮೂಲಕ ಮನವಿ ನೀಡಿದ್ದೇವೆ. ಅಧಿವೇಶನದಲ್ಲಿ ವಕ್ಫ್ ವಿರುದ್ಧ ನಿರ್ಣಯ ತೆಗೆದುಕೊಳ್ಳಬೇಕು. ಸಂಸತ್ ನಿಮ್ಮದಾದರೆ ರಸ್ತೆ ನಮ್ಮದು ಎಂಬಂತೆ ಕಾನೂನು ಕೈಗೆ ತೆಗೆದುಕೊಳ್ಳುವ ಮಾತನ್ನು ಹೇಳುತ್ತಿದ್ದಾರೆ. ಇದಕ್ಕೆ ಭಯಪಡುವುದು ಬೇಡ. ಪ್ರಧಾನ ಮಂತ್ರಿ ಅವರ ಪರವಾಗಿ ರೈತಾಪಿ ವರ್ಗವೇ ಇದೆ. ನಾವು ರಸ್ತೆಗಿಳಿದು ಎದುರಿಸುತ್ತೇವೆ. ವಕ್ಫ್ ಕಾನೂನು ತಿದ್ದುಪಡಿ ಮಾಡಿ ಎಂದು ಒತ್ತಾಯಿಸಿದರು.

ಜೈಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಬೋರ್‌ವೆಲ್ ನಾರಾಯಣ್, ಬಜರಂಗಸೇನೆ ರಾಜ್ಯಾಧ್ಯಕ್ಷ ಮಂಜುನಾಥ್, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಯೋಗಣ್ಣ, ಕದಂಬ ಸೈನ್ಯ ಸಂಘಟನೆಯ ಸಂಸ್ಥಾಪಕ ಬೇಕ್ರಿ ರಮೇಶ್, ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ದಲಿತ ಸಂಘರ್ಷ ಸಮಿತಿಯ ಉಮೇಶ್, ಮುಖಂಡರಾದ ಜೋಗಿಗೌಡ, ಪುಟ್ಟಮ್ಮ, ಇಂದ್ರಮ್ಮ ಇತರರಿದ್ದರು.

ಎಡಿಸಿಗೆ ಮನವಿ ಸಲ್ಲಿಕೆ: ವಕ್ಫ್ ಬೋರ್ಡ್ ಗೆಜೆಟ್ ನೋಟಿಫಿಕೇಷನ್ ಹಿಂಡೆಯಬೇಕು. ವಕ್ಫ್ ಬೋರ್ಡ್ ಕಾಯ್ದೆಯನ್ನು ರದ್ದುಪಡಿಸಬೇಕು. ಈ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ಕ್ರಮ ತೆಗೆದುಕೊಂಡು ರೈತರು ಮತ್ತು ಮಧ್ಯಮ ವರ್ಗದ ಜನರನ್ನು ಉಳಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.