ಜಿಲ್ಲೆ

ಆತ್ಮಹತ್ಯೆ ತಡೆಗೆ ಎಲ್ಲರ ಸಹಕಾರ ಅವಶ್ಯ

ಕೊಪ್ಪಳ: ಆತ್ಮಹತ್ಯೆ ತಡೆಗಟ್ಟುವಲ್ಲಿ ಸಮಾಜದ ಪಾತ್ರ ಬಹುಮುಖ್ಯ. ಮಾನಸಿಕವಾಗಿ ಖಿನ್ನತೆ ಒಳಗಾದವರಿಗೆ ನೆರವು ನೀಡಿ ಅವರ ಮನ ಪರಿವರ್ತನೆ ಮಾಡಬೇಕು ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್​. ದರಗದ ಹೇಳಿದರು.

ಆರೋಗ್ಯ ಇಲಾಖೆಯಿಂದ ನಗರದ ಹಳೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾನಸಿಕ ಒತ್ತಡದಲ್ಲಿ ಸಿಲುಕಿದವರಿಗೆ ನೈತಿಕ, ಸಾಮಾಜಿಕ ಬೆಂಬಲ ನೀಡುವುದು ಸಮುದಾಯದ ಕರ್ತವ್ಯ. ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಒಂಟಿ ಭಾವನೆ, ಸದಾ ಬೇಜಾರು ಇತರರಿಗೆ ಹೊರೆ ಎಂಬ ಭಾವನೆ, ಆತ್ಮಹತ್ಯೆಯ ಮಾರ್ಗಗಳ ಹುಡುಕಾಟಕ್ಕೆ ಹಚ್ಚುತ್ತದೆ. ಮದ್ಯ ಸೇವನೆ ಹೆಚ್ಚಳ ಇವು ಆತ್ಮಹತ್ಯೆ ಎಚ್ಚರಿಕೆ ಚಿಹ್ನೆಗಳು. ಹತಾಶೆ, ಉದ್ವೇಗ ಪ್ರವೃತ್ತಿ, ತೀವ್ರ ಅನಾರೋಗ್ಯ, ಒತ್ತಡಗಳು, ಮಾನಸಿಕ ಸಮಸ್ಯೆಗಳು, ನಿಕಟ ವ್ಯಕ್ತಿಯ ಸಾವು, ಮದ್ಯಪಾನ, ಮಾದಕ ವಸ್ತುಗಳ ಬಳಕೆ, ವ್ಯಸನ ಸಹ ಆತ್ಮಹತ್ಯೆಗೆ ಕಾರಣ. ಮಾನಸಿಕ ತೊಳಲಾಟದಿಂದ ಹೊರಬರಲು ಅನೇಕ ಕಾರ್ಯಕ್ರಮಗಳಿವೆ. ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ತಿಳಿಸಿದರು.

ಡಾ.ಎಚ್​.ಪ್ರಕಾಶ, ಡಾ.ವೆಂಕಟೇಶ ಕೆ., ಡಾ.ರಾಮಾಂಜನೇಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಇತರರಿದ್ದರು.