ದೇವನಹಳ್ಳಿ: ಬಿಜೆಪಿ ಜತೆ ಕೈಜೋಡಿಸಿರುವ ಜೆಡಿಎಸ್ ರೈತ ವಿರೋಧ ಕಾಯ್ದೆ ಜಾರಿಗೊಳಿಸಲು ಸಹಕರಿಸಿದೆ ಎಂದು ಶಾಸಕ ಕೃಷ್ಣ ಬೈರೇಗೌಡ ಆರೋಪಿಸಿದರು.
ತಾಲೂಕಿನ ಚಿಕ್ಕಸಣ್ಣೆಯಲ್ಲಿನ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಗ್ರಾಪಂ ಚುನಾವಣೆ ಕುರಿತ ಕಾಂಗ್ರೆಸ್ ಮುಖಂಡರೊಂದಿಗಿನ ಸಭೆಯಲ್ಲಿ ಮಾತನಾಡಿದರು. ಜೆಡಿಎಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರೈತ ವಿರೋಧಿ ನೀತಿ, ರೈತನ ಜಮೀನನ್ನು ಯಾರು ಬೇಕಾದರೂ, ಎಷ್ಟು ಬೇಕಾದರೂ ಖರೀದಿಸಬಹುದು, ವಿದ್ಯುತ್ ಖಾಸಗೀಕರಣ ನೀತಿಗಳನ್ನೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬೆಂಬಲಿಸಿದ್ದಾರೆ. ಕರೊನಾ ಸಂಕಷ್ಟದಲ್ಲಿ ಅನೇಕ ಕಾರ್ಮಿಕರು ಕೆಲಸ ಕಳೆದುಕೊಂಡು ಅಲೆದಾಡುವ ಪರಿಸ್ಥಿತಿ ಉದ್ಬವವಾಗಿದೆ. ಈ ಸಮಸ್ಯೆ ಪರಿಹರಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಕೆಪಿಸಿಸಿ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್ ಮಾತನಾಡಿ, ಈಗ ನಡೆಯುತ್ತಿರುವ ಚುನಾವಣೆಗಳಲ್ಲಿ 20 ಗ್ರಾಪಂಗಳನ್ನು ಗೆಲ್ಲಲು ಪ್ರಯತ್ನಿಸಬೇಕು. ಇದು ಮುಂದಿನ ಚುನಾವಣೆಗಳಿಗೆ ಅಡಿಪಾಯ ಆಗುತ್ತದೆ. ಆದ್ದರಿಂದ, ನಾವು ಎಚ್ಚರಿಕೆಯಿಂದ ಜನರ ಮನ ಓಲೈಸಲು ಮುಂದಾಗಬೇಕು ಎಂದರು.
ಗ್ರಾಪಂ ಚುನಾವಣೆಯಲ್ಲಿ ಮತಯಾಚನೆ ಮಾಡುವ ರೀತಿ ವಿಭಿನ್ನವಾಗಿರುತ್ತದೆ, ಎಲ್ಲ ಪಕ್ಷದವರನ್ನೂ ಗಣನೆಗೆ ತೆಗೆದುಕೊಂಡು ಸಹನೆಯಿಂದ ಮತ ಕೇಳಿ ಎಂದು ಸಲಹೆ ನೀಡಿದರು.
ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳ 30ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಮುಖಂಡ ಸಿ.ನಾರಾಯಣಸ್ವಾಮಿ, ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ. ಜಗನ್ನಾಥ್, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ. ಮಂಜುನಾಥ್, ದೇವನಹಳ್ಳಿ ಬ್ಲಾಕ್ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷ ಶಾಂತಕುಮಾರ್, ಪ್ರ.ಕಾರ್ಯದರ್ಶಿ ಎಸ್.ಪಿ. ಮುನಿರಾಜ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಕೆ.ಆರ್. ನಾಗೇಶ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ಜಿಪಂ ಮಾಜಿ ಅಧ್ಯಕ್ಷ ಬಿ. ರಾಜಣ್ಣ, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್. ರವಿಕುಮಾರ್, ಗ್ರಾಪಂ. ಮಾಜಿ ಅಧ್ಯಕ್ಷ ನಾಗೇಗೌಡ, ಎಪಿಎಂಸಿ ಉಪಾಧ್ಯಕ್ಷ ಸುಧಾಕರ್, ಜಿಪಂ ಸದಸ್ಯರಾದ ಅನಂತಕುಮಾರಿ ಚಿನ್ನಪ್ಪ, ಮಂಜುಳಮ್ಮ, ತಾಪಂ ಅಧ್ಯಕ್ಷೆ ಶಶಿಕಲಾ ಆನಂದ್, ಸದಸ್ಯೆ ಚೈತ್ರಾ ವೀರೇಗೌಡ ಮತ್ತಿತರರಿದ್ದರು.
ಬರಡು ರಾಸುಗಳಿಗೆ ಗೋಶಾಲೆ ನಿರ್ಮಿಸಿ: ಒಂದು ಬರಡು ರಾಸು ಸಾಕಲು ಹೈನುಗಾರರಿಗೆ ದಿನಂಪ್ರತಿ ನೂರರಿಂದ ನೂರೈವತ್ತು ರೂಪಾಯಿ ಖರ್ಚಾಗುತ್ತದೆ. ಅವರು ಹಾಲು ಕರೆಯುವ ಹಸುಗಳಿಂದ ಬಂದ ಹಣವನ್ನೆಲ್ಲಾ ಇದಕ್ಕಾಗಿ ವ್ಯಯಿಸಬೇಕಾಗುತ್ತದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿರುವ ಸರ್ಕಾರ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಗೋಶಾಲೆ ನಿರ್ಮಿಸಿ, ಬರಡು ರಾಸುಗಳನ್ನು ಪೋಷಿಸಲಿ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.