ಕಾರ್ಕಳ: ಪ್ರಸಕ್ತ ವರ್ಷಾವಧಿಯಲ್ಲಿ ಜೀವನ ರೀತಿ ಸುಧಾರಿಸಿದೆ. ಮೂಲ ಸೌಕರ್ಯ ಕೊರತೆ ಮಧ್ಯೆ ಕಷ್ಟದ ಪರಿಸ್ಥಿತಿಯಲ್ಲೂ ಕಾಡಂಚಿನ ಮಕ್ಕಳು ಉತ್ತಮ ಸಾಧನೆಗೈಯುತ್ತಿದ್ದಾರೆ. ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಇಂದಿನ ಸನ್ಮಾನ ಪ್ರೇರಣೆಯಾಗಲಿ ಎಂದು ನಕ್ಸಲ್ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಆರ್.ಹೇಳಿದರು.
ಕಾರ್ಕಳದ ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಹೈಸ್ಕೂಲ್‌ನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್, ಕಾರ್ಕಳದ ಆಂತರಿಕ ಭದ್ರತಾ ವಿಭಾಗ ನಕ್ಸಲ್ ನಿಗ್ರಹ ಪಡೆ ಜಂಟಿಯಾಗಿ ಆಯೋಜಿಸಿದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯೊಳಪಟ್ಟ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಜಿಲ್ಲಾ ವ್ಯಾಪ್ತಿಯ ಪರಿಶಿಷ್ಟ ಪಂಗಡ ಹಾಗೂ ಬುಡಕಟ್ಟು ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವನ್ಯಜೀವಿ ಕಾರ್ಕಳ ವಿಭಾಗದ ಎಸಿಎಪ್ ಬಸಪ್ಪ ಮುಖ್ಯ ಅತಿಥಿಯಾಗಿದ್ದರು. ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಹರ್ಷಿಣಿ ಉಪಸ್ಥಿತರಿದ್ದರು. ಕಾರ್ಕಳ ವಿಭಾಗದ ಎಎನ್‌ಎಪ್ ಡಿಎಸ್‌ಪಿ ಗಣೇಶ್ ಎಂ.ಗಣೇಶ ಹೆಗಡೆ ಸ್ವಾಗತಿಸಿ, ಪ್ರಸ್ತಾವನೆಗೈದರು.
31ವಿದ್ಯಾರ್ಥಿಗಳ ಪೈಕಿ 21ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾಸಲಾಯಿತು.
ಎಎನ್‌ಎಪ್ ಪೊಲೀಸ್ ನಿರೀಕ್ಷಕರಾದ ಸುನೀಲ್ ಕುಮಾರ್, ಸುಭಾಸ್ ಎಚ್. ಎನ್., ಪಿಎಸ್‌ಐ ಕಾಶಿನಾಥ್ ರೆಡ್ಡಿ ಬಿರಾದಾರ್ ಉಪಸ್ಥಿತರಿದ್ದರು. ಎಎನ್‌ಎಫ್ ಅಧಿಕಾರಿ ಮಧುಕುಮಾರ್ ವಂದಿಸಿದರು. ಸುನೀಲ್ ನಿರೂಪಿಸಿದರು.
ಬಾಹ್ಯ ಹೊಗಳಿಕೆಗಳಿಗೆ ಉಬ್ಬದೆ ಆಂತರಿಕ ಶಕ್ತಿಯ ಆಧಾರಿಸಿ ಸಾಧನೆಯ ಹಾದಿ ಹಿಡಿದರೆ ನಿರೀಕ್ಷಿತ ಸಾಧನೆ ತೋರುವಲ್ಲಿ ಸಫಲತೆ ಕಾಣಬಹುದು.
ಬಸಪ್ಪ, ವನ್ಯಜೀವಿ ಕಾರ್ಕಳ ವಿಭಾಗದ ಎಸಿಎಪ್