ಮೈಸೂರು: ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಸಾಹಿತಿ ಬಾನು ಮುಷ್ತಾಕ್ ಅವರನ್ನು ದಸರಾ ದಸರಾ ಉದ್ಘಾಟಕರಾಗಿ ಆಹ್ವಾನಿಸಬಾರದು ಎಂದು ಒತ್ತಾಯಿಸಿ ಹಿಂದು ಜಾಗರಣ ವೇದಿಕೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ದಸರಾದಲ್ಲಿ 9 ದಿನಗಳ ಕಾಲ ಚಾಮುಂಡೇಶ್ವರಿಯನ್ನು ಆರಾಧಿಸಲಾಗುತ್ತದೆ. ಆದರೆ, ಹಿಂದುಗಳ ಧಾರ್ಮಿಕ ಆಚರಣೆ ಬಗ್ಗೆ ನಂಬಿಕೆ ಇಲ್ಲದ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸುವುದಕ್ಕೆ ನಮ್ಮ ವಿರೋಧವಿದೆ. ಈ ಹಿಂದೆ ಬಾನು ಮುಷ್ತಾಕ್ ಕನ್ನಡ ತಾಯಿ ಭುವನೇಶ್ವರಿ, ಅರಿಶಿನ ಕುಂಕುಮ, ಕನ್ನಡ ಭಾಷೆಯ ಕುರಿತು ಸಂಕುಚಿತವಾಗಿ ಮಾತನಾಡಿದ್ದಾರೆ. ಇದರಿಂದ ಜನರ ಭಾವನೆಗೆ ಧಕ್ಕೆಯಾಗಿದೆ. ಅದೇ ರೀತಿ ದಸರಾ ಮಹೋತ್ಸವದಲ್ಲೂ ಮಾತನಾಡುವ ಸಾಧ್ಯತೆ ಇದೆ. ಹಾಗಾಗಿ ಅವರ ಆಯ್ಕೆಯನ್ನು ಕೈಬಿಡಬೇಕು. ಜಿಲ್ಲಾಡಳಿತದಿಂದ ಅವರಿಗೆ ಆಹ್ವಾನ ನೀಡಬಾರದು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಮೂರ್ತಿ ಆರಾಧನೆಯನ್ನು ವಿರೋಧಿಸುವವರು, ಬಹು ವಿಗ್ರಹ ಆರಾಧನೆ ಮಾಡುವವರನ್ನು ನಿಂದಿಸುವ ಅನೇಕರು ಇಸ್ಲಾಂ ಧರ್ಮದಲ್ಲಿದ್ದಾರೆ. ಇದೇ ರೀತಿ ಈ ದೇಶದ ಬಹುಸಂಖ್ಯಾತ ಹಿಂದುಗಳ ಭಾವನೆಗೆ ನಿರಂತರವಾಗಿ ಧಕ್ಕೆ ತರುತ್ತಿರುವವರಲ್ಲಿ ಬಾನು ಮುಷ್ತಾಕ್ ಸಹ ಒಬ್ಬರು. ಹಾಗಾಗಿ ರಾಜ್ಯ ಸರ್ಕಾರ ತಕ್ಷಣ ದಸರಾ ಉದ್ಘಾಟಕರನ್ನಾಗಿ ಬಾನು ಮುಷ್ತಾಕ್ ಅವರ ಆಯ್ಕೆ ಹಿಂಪಡೆದು, ನಾಡಿನ ಸಂಸ್ಕೃತಿ, ಪರಂಪರೆಗೆ ಗೌರವ ಕೊಡುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಕುರಾನ್‌ನಲ್ಲಿ ಮೂರ್ತಿ ಪೂಜೆ ಸುಳ್ಳು ಎನ್ನುವ ನಂಬಿಕೆಯಿದೆ. ಹಾಗಾದರೆ ದಸರಾ ಉದ್ಘಾಟನಾ ಸಂದರ್ಭದಲ್ಲಿ ಚಾಮುಂಡೇಶ್ವರಿಯನ್ನು ಪೂಜಿಸಲು ತಮ್ಮ ನಿಲುವು ಏನು ಎಂಬುದನ್ನು ಬಾನು ಮುಷ್ತಾಕ್ ತಿಳಿಸಲಿ. ಕೂಡಲೇ ಬಾನು ಮುಷ್ತಾಕ್ ಆಯ್ಕೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ. ಈ ಸಂದರ್ಭ ಹಿಂದು ಜಾಗರಣ ವೇದಿಕೆ ಪದಾಧಿಕಾರಿಗಳಾದ ಚಂದ್ರು, ರಂಗಸ್ವಾಮಿ, ಅನಿಲ್ ಹಾಗೂ ಇತರರು ಇದ್ದರು.