ರೈತ ವಿರೋಧಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ ಕುಷ್ಟಗಿಯ ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯರು ಶಿರಸ್ತೇದಾರ್ ಸತೀಶ್‌ಗೆ ಮನವಿ ಸಲ್ಲಿಸಿದರು. 
ಜಿಲ್ಲೆ

ರೈತ ವಿರೋಧಿ ಮಸೂದೆ ಹಿಂಪಡೆಯಲು ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯರ ಒತ್ತಾಯ

ಕುಷ್ಟಗಿ: ರೈತ ವಿರೋಧಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯರು ರಾಜ್ಯಪಾಲರಿಗೆ ಬರೆದ ಪತ್ರವನ್ನು ಶಿರಸ್ತೇದಾರ್ ಸತೀಶ್‌ಗೆ ಶುಕ್ರವಾರ ಸಲ್ಲಿಸಿದರು.

ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ರೈತ, ಕಾರ್ಮಿಕ, ಜನವಿರೋಧಿ ಮಸೂದೆಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟಿಸುತ್ತಿದ್ದು, ಶಾಸನ ಸಭೆಯಲ್ಲಿ ಸರಿಯಾದ ಚರ್ಚೆ, ಪೂರ್ವ ಸಮಾಲೋಚನೆಗೆ ಅವಕಾಶ ನೀಡದೆ ಮಸೂದೆಗಳನ್ನು ಅಂಗೀಕರಿಸಿ ರೈತರಿಗೆ ಮಾರಕವಾದ ಶಾಸನ ರೂಪಿಸಲಾಗಿದೆ. ರೈತರ ರಕ್ಷಣೆ ನಮ್ಮ ಹೊಣೆ ಎಂದು ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದವರು ಉಭಯ ಸದನಗಳಲ್ಲಿ ಚರ್ಚಿಸದೆ ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವೀಂದ್ರಪ್ಪ ಬಳೂಟಗಿ, ತಾಪಂ ಸದಸ್ಯ ಸುರೇಶ ಕುಂಟನಗೌಡರ್, ಪ್ರಮುಖರಾದ ಸೋಮಶೇಖರ ವೈಜಾಪುರ, ಪರಶುರಾಮ ನಾಗರಾಳ, ಮಾಲತಿ ನಾಯಕ್, ಶಕುಂತಲಾ ಹಿರೇಮಠ, ಶಿವಶಂಕರಗೌಡ ಪಾಟೀಲ್ ಕಡೂರು ಇತರರು ಇದ್ದರು.