ಮೂಡಿಗೆರೆ: ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಎಸ್ಸಿ , ಎಸ್ಟಿ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಸಚಿನ್ ಬಾನಳ್ಳಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಎಸ್ಸಿ ಎಸ್ಟಿ ಸಮುದಾಯ ಮಾತ್ರವಲ್ಲ ಯಾರಿಗೂ ತಾರತಮ್ಯ ಮಾಡದೇ ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿದೆ. ಆದರೆ ಕಾಂಗ್ರೆಸ್ ಸರ್ಕಾರ ಎಸ್ಸಿ ಎಸ್ಟಿ ಸಮುದಾಯ ಅಭಿವೃದ್ಧಿ ಬಗ್ಗೆ ತಾತ್ಸಾರ ಮನೋಭಾವದಿಂದ ಎಸ್ಸಿ, ಎಸ್ಟಿಗೆ ಮೀಸಲಿಡಬೇಕಾದ ಅನುದಾನವನ್ನು ಬಿಟ್ಟಿ ಭಾಗ್ಯಗಳ ಯೋಜನೆಗಳಿಗೆ ಬಳಕೆ ಮಾಡಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ನಾವು ಯಾವಾಗಲೂ ದಲಿತರ ಹಾಗೂ ರೈತರ ಪರವಾಗಿ ಕೆಲಸ ಮಾಡುತ್ತೇವೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದು ಈಗ ದಲಿತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಎಸ್‌ಇಪಿ, ಟಿಎಸ್‌ಪಿಗೆ ಬರುವ ಅನುದಾನ ಇಂದಿಗೂ ಬಿಡುಗಡೆ ಮಾಡಿಲ್ಲ. ಇದರಿಂದ ದಲಿತ ಸಮಾಜದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಈ ಬಾರಿ ಮಳೆ ಆರ್ಭಟಕ್ಕೆ ರಸ್ತೆ, ಸೇತುವೆ ಹಾಳಾಗಿದೆ. 100ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿದೆ. ಈ ಪೈಕಿ ದಲಿತರ ಮನೆಗಳೇ ಹೆಚ್ಚಾಗಿ ಕುಸಿದಿದೆ. ಅವರಿಗೆ ಪರಿಹಾರ ಕೊಡಲು ಸರ್ಕಾರದಲ್ಲಿ ಹಣವಿಲ್ಲ. ಹಿಂದೆ ಬಿಜೆಪಿ ಸರ್ಕಾರ ಸಂಪೂರ್ಣ ಕುಸಿದ ಮನೆಗೆ 5 ಲಕ್ಷ ರೂ ಪರಿಹಾರ ನೀಡಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಸಂಪೂರ್ಣವಾಗಿ ಕುಸಿದ ಮನೆಗೆ ಕೇವಲ 1.2 ಲಕ್ಷ ರೂ ಪರಿಹಾರ ನೀಡಲಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಶಾಸಕರೇ ಸದನದಲ್ಲಿ ಅನುದಾನ ಹೆಚ್ಚು ನೀಡಬೇಕು ಎಂದು ಕೇಳಿಕೊಂಡಿರುವುದು ದುರ್ದೈವ ಎಂದು ಲೇವಡಿ ಮಾಡಿದರು.
ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದು ಹೇಳಿದ ಒಂದು ವರ್ಷದಲ್ಲೇ ವಾಲ್ಮಿಕಿ ಹಾಗೂ ಮುಡಾ ಹಗರಣದಲ್ಲಿ ಕಾಂಗ್ರೆಸ್ ಸರ್ಕಾರ ಭಾಗಿಯಾಗಿರುವುದು ಬಯಲಿಗೆ ಬಂದಿದೆ. ದಾಖಲಾತಿ ತಿದ್ದುಪಡಿ ಮಾಡಿ ದಲಿತರಿಗೆ ನೀಡಬೇಕಾದ ನಿವೇಶನವನ್ನು ರಾಜಕಾರಣಿಗಳು ಪಡೆದಿರುವುದು ನಾಚಿಗೇಡಿನ ಸಂಗತಿ. ವಾಲ್ಮಿಕಿ ಮತ್ತು ಮುಡಾ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.