ಆನೇಕಲ್​ನಲ್ಲಿ ಬಹುಜನ ಸಮಾಜ ಪಕ್ಷದ ಸಭೆಯಲ್ಲಿ ಬಿಎಸ್​ಪಿ ಅಧ್ಯಕ್ಷ ಡಾ.ಎಂ.ಕೃಷ್ಣಮೂರ್ತಿ ಮಾತನಾಡಿದರು. ಬಹುಜನ ಸಮಾಜ ಪದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ನಾಗರಾಜ್​, ರಾಜ್ಯ ಕಾರ್ಯದರ್ಶಿ ಕನಕಪುರ ಕೃಷ್ಣಪ್ಪ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಸಿ.ಕೆ.ರಾಮು, ಎಚ್​.ಸಿ.ಶ್ರೀನಿವಾಸ್​, ಯೇಸು ಸುರೇಶ್​, ಜಿಗಣಿ ನಂಜಪ್ಪ, ಪ್ರಸನ್ನ ಕುಮಾರ್​, ಚಿಕ್ಕಹಾಗಡೆಎಲ್ಲಪ್ಪ, ದೊಡ್ಡಹಾಗಡೆ ಕೃಷ್ಣಪ್ಪ, ಮುನಿರಾಜು, ಸಿ.ಮುನಿವೀರಪ್ಪ ಗೊಲ್ಲಳ್ಳಿ ಎಲ್ಲಪ್ಪ, ಆನೇಕಲ್​ ಮುಸ್ತಾಕ್​ ಇದ್ದರು. 
ಜಿಲ್ಲೆ

ಸರ್ಕಾರದಿಂದ ದಲಿತ ವಿರೋಧಿ ನೀತಿ

ಆನೇಕಲ್​: ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತ ಅಧಿಕಾರಿಗಳ ವಿರುದ್ಧ ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಡಾ.ಎಂ.ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸೋಮವಾರ ಬಹುಜನ ಸಮಾಜ ಪಕ್ಷದಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಎಸ್ಸಿ, ಎಸ್ಟಿ ಅಧಿಕಾರಿಗಳಿಗೆ ಮುಂಬಡ್ತಿ ನೀಡದೆ ವಿರೋಧಿ ನೀತಿ ತೋರುತ್ತಿದೆ. ಸಿದ್ದರಾಮಯ್ಯ ಸರ್ಕಾರ ಅಹಿಂದ ಹೆಸರಿನಲ್ಲಿ ಎಸ್ಸಿ, ಎಸ್ಟಿಗಳ ಶೇ.90 ಮತ ಪಡೆದು ಬಹುಮತದಿಂದ ರಚನೆ ಆಗಿದೆ. ದಲಿತರ ಮತ ಪಡೆದ ಸಿದ್ದರಾಮಯ್ಯ ಭಾಷಣಕ್ಕೆ ಮಾತ್ರ ದಲಿತರನ್ನು ಸೀಮಿತ ಮಾಡಿಕೊಂಡಿದ್ದಾರೆ. ಕೋಲಾರ ಜಿಲ್ಲೆ ಹೊರತುಪಡಿಸಿ ಎಲ್ಲಿಯೂ ಒಬ್ಬರೂ ಎಸ್ಸಿ, ಎಸ್ಟಿ ಜಿಲ್ಲಾಧಿಕಾರಿ ಇಲ್ಲ. ಹಾಗಾದರೆ ದಲಿತರಿಗೆ ಜಿಲ್ಲಾಧಿಕಾರಿ ಆಗಿ ಅಧಿಕಾರ ಪಡೆಯುವ ಅರ್ಹತೆ ಇಲ್ಲವೇ ಎಂದು ಪ್ರಶ್ನಿಸಿದರು.

ದಲಿತರನ್ನು ಮೂಲೆ ಗುಂಪು ಮಾಡುವುದು ಗೌರವ ತರಲಿದೆಯೇ ಎಂದು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದ ಅವರು, ನೀವು ಅಹಿಂದ ಎಂದು ಹೇಳಲು ಶಕ್ತರೇ? ನಿಮಗೆ ದಲಿತರ ಪರ ಎಂದು ಹೇಳಲು ಯಾವ ನೈತಿಕತೆ ಇದೆ? ಮಲ್ಲಿಕಾರ್ಜುನ ರ್ಖಗೆ ಹಾಗೂ ರಾಹುಲ್​ ಗಾಂಧಿ ಕೇಂದ್ರದಲ್ಲಿ ಈ ಬಗ್ಗೆ ಮಾತನಾಡದೇ ಸುಮ್ಮನಿದ್ದಾರೆ ಎಂದು ಕಿಡಿಕಾರಿದರು.

ಸಾಮಾನ್ಯ ಕೆಟಗರಿಯ 288 ಜನರನ್ನು ಪದವಿ ಪೂರ್ವ ಕಾಲೇಜಿಗೆ ಪ್ರಾಂಶುಪಾಲರಾಗಿ ನೇಮಕ ಮಾಡಿದ್ದಾರೆ, 80 ಜನ ಎಸ್ಸಿ, ಎಸ್ಟಿಯವರು ಮನವಿ ಸಲ್ಲಿಸಿದರೂ ಆದೇಶ ಧಿಕ್ಕರಿಸಿ ಎಸ್ಸಿಎಸ್ಟಿ ಸದನ ಸಮಿತಿಯ ನರೇಂದ್ರ ಸ್ವಾಮಿ ಅವರ ಮಾಹಿತಿಯನ್ನು ಪರಿಗಣಿಸದೆ ಸರ್ಕಾರ ದಲಿತರ ವಿರೋಧಿ ನೀತಿ ತೋರಿದೆ. ಸಿದ್ದರಾಮಯ್ಯ ಆಪ್ತ ಕೆ.ಜೆ.ಜಾರ್ಜ್​ ಸಚಿವರಾಗಿರುವ ಇಂಧನ ಇಲಾಖೆಯಲ್ಲಿ 160 ಎಸ್ಸಿ, ಎಸ್ಟಿ ಸಹಾಯಕ ಇಂಜಿನಿಯರ್​ಗಳಿಗೆ ಬಡ್ತಿ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಕೃಷಿ ಇಲಾಖೆಯಲ್ಲಿ ಸುಮಾರು 50 ಅಧಿಕಾರಿಗಳಿಗೆ ಬಡ್ತಿ ನೀಡಿಲ್ಲ. ತೋಟಗಾರಿಕೆ ಇಲಾಖೆಯಲ್ಲಿ ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡುವಾಗ ರೋಸ್ಟರ್​ ಪದ್ಧತಿ ಅಳವಡಿಸಿಕೊಳ್ಳದೆ ನೌಕರರಿಗೆ ವಂಚನೆ ಮಾಡಲಾಗಿದೆ. ಪರಮೇಶ್ವರ್​ ಅವರೇ ಗೃಹಮಂತ್ರಿಯಾಗಿದ್ದರೂ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್​ ಇಲಾಖೆಯಲ್ಲಿ ವಿವಿಧ ವೃಂದಗಳಿಗೆ ಬಡ್ತಿ ನೀಡುವಾಗ ನೌಕರರಿಗೆ ಅನ್ಯಾಯ ಮಾಡಲಾಗಿದೆ ಎಂದರು. ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ನಾಗರಾಜ್​ ಮಾತನಾಡಿ, ಅಹಿಂದ, ಬಡವರ ಪರ ಎಂದು ಹೇಳಿ ಜನರಿಗೆ ಮೋಸ ಮಾಡಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದೆ. ಇದೀಗ ದಲಿತರ ವಿರೋಧಿಗಳು ಎಂಬುದನ್ನು ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು. ಬಹುಜನ ಸಮಾಜ ಪಕ್ಷ ಮುಂದಿನ ದಿನಗಳಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಎಸ್ಸಿ, ಎಸ್ಟಿಯವರಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಿದೆ ಎಂದರು.