ಜಿಲ್ಲೆ

ಹಾಸ್ಟೆಲ್ ಗುತ್ತಿಗೆ ನೌಕರರಿಗೆ ಸಂಬಳದಲ್ಲಿ ವಂಚನೆ

Mysuru - Desk - Yashavanth Kumar N

ಯಳಂದೂರು: ಜಿಲ್ಲಾದ್ಯಂತ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿರುವ ನೌಕರರಿಗೆ ಗುತ್ತಿಗೆದಾರರು ಕಡಿಮೆ ಸಂಬಳ ನೀಡುವ ಮೂಲಕ ವಂಚಿಸುತ್ತಿದ್ದಾರೆ ಎಂದು ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಜಿಲ್ಲಾಧ್ಯಕ್ಷ ಯರಗಂಬಳ್ಳಿ ಪರಶಿವಮೂರ್ತಿ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ 140 ಜನ ಅಡುಗೆ ಸಹಾಯಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಮಾಹೆಯಾನೆ 20,320 ರೂ.ಗಳ ಸಂಬಳ ನೀಡಬೇಕು. ಇದರಲ್ಲಿ ಇಎಸ್‌ಐ, ಪಿಎಫ್ ಕಡಿತಗೊಳಿಸಿ ಪ್ರತಿ ತಿಂಗಳು 14,381 ರೂ. ಸಂಬಳ ನೀಡಬೇಕು. ಆದರೆ ಗುತ್ತಿಗೆ ಪಡೆದುಕೊಂಡಿರುವ ಮೈಸೂರಿನ ಸಂಸ್ಥೆಯು ಕೆಲಸಗಾರರಿಗೆ 10 ರಿಂದ 11 ಸಾವಿರ ರೂ. ನೀಡುತ್ತಿದ್ದು, ಪ್ರತಿ ತಿಂಗಳು 4 ರಿಂದ 6 ಲಕ್ಷ ರೂ.ಗಳನ್ನು ನೌಕರರಿಗೆ ವಂಚಿಸಲಾಗುತ್ತಿದೆ ಎಂದು ಆಪಾದಿಸಿದರು.

ತಾಲೂಕಿನ ಕೆಲವು ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿ ಕೊರತೆಯ ನೆಪವೊಡ್ಡಿ ಡಿ ಗ್ರೂಪ್ ನೌಕರರು ಹಾಗೂ ಅಡುಗೆ ಮಾಡುವವರಿಗೂ ನಿಲಯಪಾಲಕರ ಹುದ್ದೆಯನ್ನು ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ಸಾಮಗ್ರಿ ಬಳಕೆಯಾಗುತ್ತಿಲ್ಲ. ಇದನ್ನು ಪೂರೈಸುವ ಏಜೆನ್ಸಿ ಜತೆ ವಾರ್ಡನ್‌ಗಳು ಶಾಮೀಲಾಗಿದ್ದಾರೆ. ಮಕ್ಕಳ ಹಾಜರಾತಿ ಕಡಿಮೆ ಇದ್ದರೂ ಶೇ.100ರಷ್ಟು ಹಾಜರಾತಿ ತೋರಿಸಿ ಆಹಾರ ಪದಾರ್ಥಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬಯೋಮೆಟ್ರಿಕ್ ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿಫಲರಾಗಿದ್ದಾರೆ. ಆದ್ದರಿಂದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಯರಗಂಬಳ್ಳಿ ಗ್ರಾಪಂನಲ್ಲಿ ನರೇಗಾ ಯೋಜನೆಯಡಿ 2021ರಲ್ಲಿ ಕಾಮಗಾರಿ ನಡೆಸದೆ 2,69.063 ರೂ. ಡ್ರಾ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಒಂಬುಡ್ಸ್‌ಮನ್‌ಗೆ ದೂರು ನೀಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಒಂಬುಡ್ಸ್‌ಮನ್ ಕಳೆದ ಅಕ್ಟೋಬರ್‌ನಲ್ಲಿ ಆದೇಶ ನೀಡಿದ್ದು, ಅಂದಿನ ಪಿಡಿಒ ಆದಿಶೇಷಮೂರ್ತಿ, ಅಧ್ಯಕ್ಷ ಡಿ.ಸಿ.ಬಾಬು, ಜೆಇ ಆದರ್ಶ ಅವರಿಗೆ ತಲಾ 80,719 ರೂ., ಡಾಟಾ ಎಂಟ್ರಿ ಆಪರೇಟರ್‌ನಿಂದ 26,900 ರೂ.ಗಳು ಸೇರಿದಂತೆ ಒಟ್ಟು 2,69,063 ರೂ. ವಸೂಲಿ ಮಾಡಿ ಜಮೆ ಮಾಡಬೇಕು ಒಂಬುಡ್ಸ್‌ಮನ್‌ನಲ್ಲಿ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜಣ್ಣ, ರೇವಣ್ಣ, ಬಣ್ಣಾರಿ ಮಹೇಶ್, ಬದನಗುಪ್ಪೆ ಮಹೇಶ್, ಮರಪ್ಪ ಇದ್ದರು.