ಭ್ರಷ್ಟಾಚಾರದ ವಿರುದ್ಧ ಜಾಗೃತಿ ಸಪ್ತಾಹ  
ಜಿಲ್ಲೆ

ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಅವಶ್ಯ

ಶಿವರಾಜ.ಎಂ

ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಎನ್.ಎಂ.ಜಗದೀಶ್ ಹೇಳಿಕೆ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರತಿ ಮಗು ಭ್ರಷ್ಟಾಚಾರವನ್ನು ಕಟುವಾಗಿ ವಿರೋಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಎನ್.ಎಂ.ಜಗದೀಶ್ ತಿಳಿಸಿದರು.
ದೇವನಹಳ್ಳಿ ತಾಲೂಕು ಆಲೂರು ದುದ್ದನಹಳ್ಳಿ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ವ್ಯವಸ್ಥೆಯನ್ನು ಕಾಡುವ ಅತಿಮುಖ್ಯ ಸಮಸ್ಯೆಗಳಲ್ಲಿ ಭ್ರಷ್ಟಾಚಾರ ಒಂದಾಗಿದೆ. ಸಂವಿಧಾನದ 3 ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಬಲವರ್ಧನೆಗೆ ಮಕ್ಕಳು ಬಾಲ್ಯದಿಂದಲೇ ಉತ್ತಮ ಮೌಲ್ಯ ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜದ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡುವಂತಾಗಬೇಕು ಎಂದರು.
ದೇಶ ಸುರಕ್ಷಿತವಾಗಿರಲು ಗಡಿಯಲ್ಲಿ ಕಾಯುವ ಸೈನಿಕರು ಎಷ್ಟು ಮುಖ್ಯವೋ ಪ್ರಜೆಗಳಾಗಿ ಭ್ರಷ್ಟಾಚಾರಮುಕ್ತ ವ್ಯವಸ್ಥೆ ನಿರ್ಮಾಣ ಮಾಡಲು ನಮ್ಮಗಳ ಕರ್ತವ್ಯವೂ ಅತಿ ಮುಖ್ಯವಾಗಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಹೋರಾಡುವ ಪ್ರತಿ ವ್ಯಕ್ತಿಯೂ ಯೋಧನಂತೆ ಎಂದರು.
ಮೌಲ್ಯ ಶಿಕ್ಷಣ ಕಲಿಯಬೇಕು: ಭ್ರಷ್ಟಾಚಾರ ಎಲ್ಲ ಹಂತಗಳಲ್ಲೂ ಆವರಿಸಿದ್ದು, ಇದರ ನಿರ್ಮೂಲನೆಗೆ ಮಕ್ಕಳು ಶಿಕ್ಷಣದ ಜತೆ ಮೌಲ್ಯ ಶಿಕ್ಷಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ನವೋದಯ ಶಾಲೆಯ ಪ್ರಾಂಶುಪಾಲ ಚಕ್ರವರ್ತಿ ತಿಳಿಸಿದರು.
ಪ್ರತಿಯೊಬ್ಬರ ಸ್ವಯಂ ಪ್ರೇರಿತ ಬದಲಾವಣೆಯಿಂದ ಸಮಾಜದ ಬದಲಾವಣೆಗೆ ಸಹಕಾರಿಸಬೇಕು. ಉನ್ನತ ಹುದ್ದೆಗಳಿಗೆ ಹೋದಾಗ ಅಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಬೇಕು ಎಂದು ಹೇಳಿದರು.
ಜಾಗೃತಿ ಅವಶ್ಯಕತೆ ಇದೆ: ವ್ಯವಸ್ಥೆಯ ಜ್ವಲಂತ ಸಮಸ್ಯೆಗಳಿಗೆ ಭ್ರಷ್ಟಾಚಾರ ಹತ್ತಿರದ ಸಂಬಂಧ ಹೊಂದಿದೆ, ಭ್ರಷ್ಟಾಚಾರವನ್ನು ನಿಯಂತ್ರಣ ಮಾಡದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಆಲೂರು ದುದ್ದನಹಳ್ಳಿ ಪಿಡಿಒ ನಂದಿನಿ ಹೇಳಿದರು.