ಜಿಲ್ಲೆ

ಜೀವನ ರೂಪಿಸಿಕೊಳ್ಳಲು ಶಿಕ್ಷಣ ದಾರಿದೀಪ: ಮೀನುಗಾರಿಕೆ ಮಹಾಮಂಡಳಿ ನಿರ್ದೇಶಕ ಈರಯ್ಯ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಹಾಕಿದರೆ ಉತ್ತಮ ಜೀವನ ರೂಪಿಸಿಕೊಳ್ಳಲು ಶಿಕ್ಷಣ ದಾರಿದೀಪವಾಗುತ್ತದೆ ಎಂದು ರಾಜ್ಯ ಮೀನುಗಾರಿಕೆ ಮಹಾಮಂಡಳಿ ನಿರ್ದೇಶಕ ಈರಯ್ಯ ಹೇಳಿದರು.

ತಾಲೂಕಿನ ಕನ್ನಲಿ ಗ್ರಾಮದ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಬಾಲಕಾರ್ಮಿಕ ವಿರೋಧಿ ದಿನ ಹಾಗೂ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಲಿ ಗ್ರಾಮದ ವಿದ್ಯಾರ್ಥಿ ನವನೀತ್ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್ಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾನೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಮಲ್ಲರಾಜು ಮಾತನಾಡಿ, ಬಾಲ ಕಾರ್ಮಿಕತನ ಮಕ್ಕಳ ಬಾಲ್ಯ ಮತ್ತು ಜೀವನವನ್ನು ನಾಶಮಾಡುತ್ತದೆ. ಇದನ್ನು ಕೊನೆಗೊಳಿಸಬೇಕಾದರೆ ಶಿಕ್ಷಣ ಹಾಗೂ ಪಾಲಕರ ಪಾತ್ರ ಮುಖ್ಯ ಎಂದರು.

ಮೈಸೂರು ಸಮೃದ್ಧಿ ಎಂಟರ್‌ಪ್ರೈಸಸ್‌ನ ಡಿ.ಬಿ.ನವೀನ್‌ಕುಮಾರ್ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿದರು. ಶಿಕ್ಷಕ ಸತೀಶ್‌ಕುಮಾರ್ ಬಾಲಕಾರ್ಮಿಕ ವಿರೋಧಿ ದಿನದ ಪ್ರಮಾಣವಚನ ಬೋಧಿಸಿದರು. ಶಿಕ್ಷಕರಾದ ಮಾಲತಿ, ಸುನೀತಾ, ಎಲಿಜಬೆತ್, ಮಹದೇವ್ ಇದ್ದರು.