ಮಂಡ್ಯ: ಹಣ ಹಾಗೂ ಇತರೆ ಆಮಿಷಗಳಿಗೆ ಒಳಗಾಗಿ ಬಾಲ ಕಾರ್ಮಿಕರಾಗುವುದು ಅಪರಾಧ. ಬದಲಿಗೆ ಶಿಕ್ಷಣ ಪಡೆದು ಸಾಧಕರಾಗಬೇಕು ಎಂದ ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕ ಕೆ.ಆರ್.ಮಂಜುನಾಥ್ ಕರೆ ನೀಡುದರು.
ತಾಲೂಕಿನ ಜೋಡಿ ಹೊಡಾಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿಮ್ಮನ್ನು ಯಾರಾದರೂ ಬಲವಂತವಾಗಿ ಶಿಕ್ಷಣ ವಂಚಿತರನ್ನಾಗಿ ಮಾಡಿ ದುಡಿಮೆ ಕಾರ್ಯಕ್ಕೆ ಬಳಸಿಕೊಳ್ಳುವುದು ಅಪರಾಧ. ಇಂತಹ ಸನ್ನಿವೇಶ ನಿಮಗಾಗಲಿ ಅಥವಾ ಇತರೆ ವಿದ್ಯಾರ್ಥಿಗಳಾಗಿದಲ್ಲಿ ಕಂಡುಬಂದರೆ ಮಕ್ಕಳ ಸಹಾಯವಾಣಿಗೆ ದೂರವಾಣಿ ಕರೆ ಮಾಡಬಹುದು ಎಂದು ಹೇಳಿದರು.
ಶಿಕ್ಷಕರಾದ ಕೆ.ಆರ್.ಶಶಿಧರ ಈಚಗೆರೆ, ಡಿ.ಎಸ್.ಕೃಷ್ಣೇಗೌಡ, ಆರ್.ಚಂದ್ರಮತಿ, ಬಿ.ಸಿ.ಶಿಲ್ಪಾ ಇತರರಿದ್ದರು. ಇದೇ ವೇಳೆ ಶಿಕ್ಷಕಿ ಎನ್.ಕೆ.ಪವಿತ್ರಾ ಬಾಲಕಾರ್ಮಿಕ ವಿರೋಧಿ ದಿನದ ಮಹತ್ವ ಕುರಿತು ಮಾತನಾಡಿದರು. ಶಿಕ್ಷಕ ಕೆ.ಟಿ.ನಾರಾಯಣರಾಜ್ ಅರಸ್ ಬಾಲಕಾರ್ಮಿಕ ವಿರೋಧಿ ಪ್ರಮಾಣ ವಚನ ಬೋಧಿಸಿದರು. ಬಳಿಕ ಅಲಯನ್ಸ್ ಕ್ಲಬ್‌ನ ಜಿಲ್ಲಾ ಗವರ್ನರ್ ಕೆ.ಟಿ.ಹನುಮಂತು ಶಾಲೆಗೆ ನೀಡಿದ್ದ ಗ್ಲೋಬ್, ಅಟ್ಲಾಸ್ ಹಾಗೂ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.