ತುಮಕೂರು: ದೇಶದೆಲ್ಲೆಡೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಶಾಂತಿಯುತ ಹೋರಾಟಗಳು ನಡೆಯುತ್ತಿದ್ದು ಬಿಜೆಪಿ, ಆರ್‌ಎಸ್‌ಎಸ್ ಶಾಂತಿ ಕದಡಲು ಪ್ರಯತ್ನಿಸುತ್ತಿವೆ ಎಂದು ಪಾಲಿಕೆ ಸದಸ್ಯ ಕಾಂಗ್ರೆಸ್‌ನ ಜೆ.ಕುಮಾರ್ ಹೇಳಿದರು.
ನಗರದ ಮರಳೂರು ಜನತಾ ಕಾಲನಿಯಲ್ಲಿ ಭಾನುವಾರ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಕಾಯ್ದೆ, ಕಾನೂನು ಜಾರಿಗೊಳಿಸಬೇಕಾದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ, ಬಿಜೆಪಿ ಸರ್ಕಾರ ಇದಕ್ಕೆ ವಿರುದ್ಧವಾಗಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.
ಮನುಷ್ಯತ್ವವೇ ಇಲ್ಲದ ಬಿಜೆಪಿ ಸರ್ಕಾರ ದೇಶದಲ್ಲಿ ಆಡಳಿತ ನಡೆಸುತ್ತಿದೆ. ನಾವು ಮಾಡಿದ್ದೇ ಸರಿ, ಹೇಳಿದ್ದೆ ನ್ಯಾಯ ಎನ್ನುವಂತೆ ವರ್ತಿಸುತ್ತಿದೆ. ದೇಶದಲ್ಲಿ ಹತ್ತಾರು ಧರ್ಮ,ಆಚಾರ-ವಿಚಾರಗಳಿದ್ದರೂ ನಮ್ಮ ನಡುವೆ ಸಹೋದರತ್ವ ಇದೆ. ನಮ್ಮ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಆರ್‌ಎಸ್‌ಎಸ್, ಬಿಜೆಪಿ ಮಾಡುತ್ತಿವೆ. ಈ ಮೂಲಕ ದೇಶದಲ್ಲಿ ನೆಮ್ಮದಿಗೆ ಕಂಟಕಪ್ರಾಯವಾಗಿವೆ ಎಂದು ತಿಳಿಸಿದರು. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ನಂತಹ ಸಂವಿಧಾನ ವಿರೋಧಿ ಕಾಯ್ದೆಗಳ ಜಾರಿಗೆ ಬಳಸುವ ಕೋಟ್ಯಂತರ ರೂಪಾಯಿಯನ್ನು ದೇಶದ ಅಭಿವೃದ್ಧಿಗೆ ಬಳಸಬಹುದು ಎನ್ನುವ ವಿವೇಚನೆಯೂ ದೇಶದಲ್ಲಿ ಆಡಳಿತ ನಡೆಸುವರಿಗಿಲ್ಲ ಎಂದು ವಕೀಲ ಅಜೀಮ್ ಷರೀಫ್ ಹೇಳಿದರು.
ಕಾನೂನಿನ ಅರಿವಿಲ್ಲದವರು, ಸಂವಿಧಾನದ ತಿಳಿವಳಿಕೆ ಇಲ್ಲದವರು ಅಧಿಕಾರ ನಡೆಸುತ್ತಿದ್ದಾರೆ. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಗೊತ್ತಿಲ್ಲದವರು ಬಜೆಟ್ ಮಂಡಿಸುತ್ತಿದ್ದಾರೆ. ದೇಶವನ್ನು, ಸಂವಿಧಾನವನ್ನು ಉಳಿಸಬೇಕಿದೆ. ಜನವಿರೋಧಿ, ಸಂವಿಧಾನ ವಿರೋಧಿ ಕಾನೂನು, ಕಾಯ್ದೆಗಳು ನಿಲ್ಲುವವರೆಗೂ ನಮ್ಮ ಹೋರಾಟ ನಿಲ್ಲಬಾರದು ಎಂದರು. ಮಾಜಿ ಶಾಸಕ ಷಫೀಕ್ ಅಹ್ಮದ್, ಪಾಲಿಕೆ ಸದಸ್ಯ ಎಚ್‌ಡಿಕೆ ಮಂಜುನಾಥ್, ಮೌಲಾನ ಜುಲ್ಫಕರ್ ಅಹಮ್ಮದ್, ಮೌಲಾನಾ ಅಬ್ಬಾಸ್ ಮತ್ತಿತರರು ಉಪಸ್ಥಿತರಿದ್ದರು.
ದೇಶ ರಾಮರಾಜ್ಯ ಆಗಬೇಕೆಂಬ ಕನಸನ್ನು ಗಾಂಧೀಜಿ ಕಂಡಿದ್ದರು. ಪಾಕಿಸ್ತಾನ, ಬಾಂಗ್ಲಾ ದೇಶಗಳಿಗಿಂತ ನಮ್ಮ ದೇಶ ಕೆಳಕ್ಕಿಳಿದಿದೆ. ಸಂವಿಧಾನಬಾಹಿರ ನಿಲುವುಗಳ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಿದ್ದಾರೆ. ಸಂವಿಧಾನ ವಿರುದ್ಧವಾದ ನಿಲುವುಗಳನ್ನು ತೆಗೆದುಕೊಂಡರೆ ಯುದ್ಧ ಮರುಕಳಿಸುವ ಸಾಧ್ಯತೆ ಇದೆ. ಜೆ.ಕುಮಾರ್ ಪಾಲಿಕೆ ಸದಸ್ಯ