ಆರ್.ಕೃಷ್ಣ ಮೈಸೂರು
ಎರಡು ದಿನಗಳ ಹಿಂದೆ ಬಿರುಗಾಳಿಯೊಂದಿಗೆ ಮಳೆ ಅಬ್ಬರಿಸಿದ್ದರೂ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗಿದೆ. ಇದರಿಂದ ಅಂತರ್ಜಲದ ಕೊರತೆ ನಡುವೆ ಮಳೆ ಸಹ ಕೈ ಕೊಟ್ಟಿದೆ. ಬೇಸಿಗೆಯ ವೇಳೆ ಪೂರ್ವ ಮುಂಗಾರು ಮಳೆ ಕೈಕೊಟ್ಟಿದ್ದು, ಬಿತ್ತನೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ.
ಕಳೆದ ನಾಲ್ಕು ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗದೇ ಶೇ.75ರಷ್ಟು ಮಳೆ ಕೊರೆತೆಯಾಗಿದ್ದು, ಕೃಷಿ ಚಟುವಟಿಕೆಗೆ ತೀವ್ರ ಹಿನ್ನೆಡೆಯಾಗಿದೆ. ಜಿಲ್ಲೆಯ ಪೂರ್ವ ಮುಂಗಾರು ವೇಳೆ ಬರೋಬ್ಬರಿ 58 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ನಡೆಯಬೇಕಿದ್ದ ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ.
ಅಲ್ಲದೆ ತೋಟಗಾರಿಕೆ ಬೆಳೆಗಳ ಇಳುವರಿಯೊಂದಿಗೆ ಕೃಷಿ ಚಟುವಟಿಕೆಯ ಬಿತ್ತನೆ ಕಾರ್ಯದ ಮೇಲೂ ಪರಿಣಾಮ ಬೀರಿದ್ದು, ತರಕಾರಿ ಮತ್ತು ಸೊಪ್ಪು ಬೆಳೆಯ ಪ್ರಮಾಣ ಕುಸಿದಿದ್ದು, ಬೆಲೆ ಗಗನಕ್ಕೇರಿದೆ.
ಕಳೆದ ಜನವರಿಯಿಂದ ಇದುವರೆಗೂ ವಾಡಿಕೆಯಂತೆ 85 ಮಿ.ಮೀ.ರಷ್ಟು ಮಳೆಯಾಗಬೇಕಿದ್ದರೂ 21 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ. ಇದರಿಂದಾಗಿ ಶೇ.75ರಷ್ಟು ಮಳೆ ಕೊರತೆಯಾದಂತಾಗಿದೆ.
ಕುಡಿಯುವ ನೀರಿಗೂ ಆತಂಕ:
ಎರಡು ದಿನಗಳ ಹಿಂದೆ ಬಿರುಗಾಳಿಯೊಂದಿಗೆ ಅಬ್ಬರಿಸಿ ನಗರ ಪ್ರದೇಶದಲ್ಲಿ ಅವಾಂತರವನ್ನೇ ಸೃಷ್ಠಿಸಿತ್ತು. ನೂರಾರು ವಿದ್ಯುತ್ ಕಂಬ, ಮರಗಳು, ರೆಂಬೆ, ಕೊಂಬೆಗಳನ್ನು ಧರೆಗುರುಳುವಂತೆ ಮಾಡಿತು. ಆ ಒಂದು ದಿನ ವಾತಾವರಣ ತಂಪಾಗಿದ್ದರೂ, ಬಳಿಕ ಬಿಸಿಲ ಬೇಗೆ ಹೆಚ್ಚಾಗಿದೆ. ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ತಾಪಮಾನ, ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಕೃಷಿ ಮೇಲೂ ದುಷ್ಪರಿಣಾಮ:
ಮಳೆಯ ಕೊರತೆಯು ಕೃಷಿಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿರುವುದು ರೈತರನ್ನು ಕೃಷಿಯಿಂದ ವಿಮುಖರನ್ನಾಗಿಸಿದೆ. ತೋಟಗಾರಿಕೆ ಬೆಳೆಗಳನ್ನು ನಂಬಿಕೊಂಡಿದ್ದ ರೈತರು, ಕಣ್ಣೆದುರೇ ಬೆಳೆ ಒಣಗುತ್ತಿರುವುದನ್ನು ನೋಡುವಂತಾಗಿದೆ. ಮತ್ತೊಂದೆಡೆ ಕಳೆದ ಒಂದು ತಿಂಗಳಿಂದ ಬಿತ್ತನೆ ಕಾರ್ಯಕ್ಕೆ ಕಾಯುತ್ತಿದ್ದ ರೈತರಿಗೆ ಮಳೆರಾಯ ಸಿಗದೆ ಬಿತ್ತನೆ ಕಾರ್ಯ ನಡೆಸದೆ ಸುಮ್ಮನಾಗಿದ್ದಾರೆ.
ಅಂತರ್ಜಲವನ್ನೇ ನಂಬಿಕೊಂಡು ತರಕಾರಿ ಬೆಳೆಯುತ್ತಿದ್ದ ರೈತರು, ಈಗ ಬೋರ್‌ವೇಲ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಕಡಿಮೆ ಪ್ರದೇಶದಲ್ಲಿ ತರಕಾರಿ ಬೆಳೆಯುತ್ತಿದ್ದಾರೆ. ಆದರೆ ಬಿರುಗಾಳಿ ಸೃಷ್ಠಿಸಿದ ಆವಾಂತರದಿಂದ ತರಕಾರಿ, ಹಣ್ಣಿನ ಗಿಡಗಳು ನೆಲ ಕಚ್ಚುವಂತಾಗಿದ್ದು, ತರಕಾರಿ ಮತ್ತು ಸೊಪ್ಪಿನ ಬೆಲೆ ಗಗನಕ್ಕೆ ಏರುವಂತಾಗಿದೆ.
ಮಳೆಯ ಕೊರತೆಯು ತೋಟಗಾರಿಕೆ ಬೆಳೆಗಳ ಮೇಲೂ ಪರಿಣಾಮ ಬೀರಿದೆ. ಮಾವಿನ ಇಳುವರಿ ಕಡಿಮೆಯಾಗಲಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಾವು ಬೆಳೆ ಬರಲು ಸಾಧ್ಯವಾಗುವುದಿಲ್ಲ. ತೋಟಗಾರಿಕೆ ಬೆಳೆಗಳ ಇಳುವರಿ ಕಡಿಮೆಯಾಗಲಿದೆ.
ಕೋಟ್
ಮೈಸೂರು ಜಿಲ್ಲೆಯಲ್ಲಿ 58 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯಬೇಕಿತ್ತು. ಆದರೆ ಮಳೆ ಕೊರತೆಯಿಂದಾಗಿ ಸ್ಥಗಿತಗೊಂಡಿದೆ. ಈ ವೇಳೆಗೆ ಜಿಲ್ಲೆಯಲ್ಲಿ ರೈತರು ಹತ್ತಿ, ಹೊಗೆಸೊಪ್ಪು, ದ್ವಿದಳ ಧಾನ್ಯಗಳ ಬಿತ್ತನೆ ಕಾರ್ಯ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಮಳೆಯಾಗದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯದಲ್ಲಿ ವಿಳಂಬವಾಗಿದೆ.
ಚಂದ್ರಶೇಖರ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ
ತಾಲೂಕುವಾರು ಮಳೆ ವಿವರ:
(ಜನವರಿಯಿಂದ ಇಲ್ಲಿಯವರೆಗೆ ವಾಡಿಕೆ ಮಳೆ, ಬಂದ ಮಳೆ, ವ್ಯತ್ಯಾಸ ಮಿ.ಮೀ.ಗಳಲ್ಲಿ)
ಎಚ್.ಡಿ.ಕೋಟೆ: 102.4 ಮಿ.ಮೀ. 26.2 ಮಿ.ಮೀ. ಶೇ.74
ಹುಣಸೂರು: 86.5 ಮಿ.ಮೀ. 29.2 ಮಿ.ಮೀ. ಶೇ.66
ಕೆ.ಆರ್. ನಗರ: 78.4 ಮಿ.ಮೀ. 16.8 ಮಿ.ಮೀ. ಶೇ.79
ಮೈಸೂರು ತಾಲೂಕು: 89.2 ಮಿ.ಮೀ. 12.1 ಮಿ.ಮೀ ಶೇ. 86
ನಂಜನಗೂಡು: 84.5 ಮಿ.ಮೀ. 13.7 ಮಿ.ಮೀ. ಶೇ.84
ಪಿರಿಯಾಪಟ್ಟಣ: 93.5 ಮಿ.ಮೀ. 25.1 ಮಿ.ಮೀ. ಶೇ.73
ತಿ.ನರಸೀಪುರ: 69.8 ಮಿ.ಮೀ. 5.7 ಮಿ.ಮೀ. ಶೇ.92
ಸರಗೂರು: 91.6 ಮಿ.ಮೀ. 33.1 ಮಿ.ಮೀ. ಶೇ.64
ಸಾಲಿಗ್ರಾಮ: 72.2 ಮಿ.ಮೀ. 30.6 ಮಿ.ಮೀ. ಶೇ.58