ಜಿಲ್ಲೆ

ಮತ್ತಿಬ್ಬರಲ್ಲಿ ಕರೊನಾ ಸೊಂಕು ; ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾಹಿತಿ

Tumakuru

ತುಮಕೂರು: ಜಿಲ್ಲೆಯಲ್ಲಿ ಮತ್ತಿಬ್ಬರಿಗೆ ಕರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 7ಕ್ಕೇರಿದೆ. ಕಳೆದ 8 ದಿನಗಳಲ್ಲಿ 5 ಕರೊನಾ ಪಾಸಿಟಿವ್ ಪ್ರಕರಣಗಳಾಗಿದ್ದು, ಕಲ್ಪತರು ನಾಡಿನ ಜನತೆಯಲ್ಲಿ ಆತಂಕ ಹೆಚ್ಚಿದೆ.

ಕರೊನಾಕ್ಕೆ ಬಲಿಯಾಗಿದ್ದ ತುಮಕೂರಿನ ಕೆಎಚ್‌ಬಿ ಕಾಲನಿ ನಿವಾಸಿ 74 ವರ್ಷ ವೃದ್ಧ (ಪಿ-535) ಹಾಗೂ ಆತನ ಸೋಂಕಿತ 65 ವರ್ಷದ ಪತ್ನಿ (ಪಿ-553) ಸಂಪರ್ಕದಲ್ಲಿದ್ದ ಪಕ್ಕದ ಮನೆಯ 40 ವರ್ಷದ ವ್ಯಕ್ತಿ ಹಾಗೂ ಆತನ 29 ವರ್ಷದ ಪತ್ನಿಗೆ ಕರೊನಾ ಸೋಂಕಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ರ‌್ಯಾಂಡಮ್ ಟೆಸ್ಟ್‌ನಲ್ಲಿ ಪತ್ತೆ: ಸೋಂಕಿತರ ಪಕ್ಕದ ಮನೆಯಲ್ಲಿ ನೆಲೆಸಿದ್ದವರಾದ್ದರಿಂದ ರ‌್ಯಾಂಡಮ್ ಪರೀಕ್ಷೆಗೊಳಪಡಿಸಿದಾಗ ಕರೊನಾ ಸೋಂಕಿರುವುದು ದೃಢಪಟ್ಟಿದೆ. ಇವರನ್ನು ಪಿ-591 ಹಾಗೂ ಪಿ-592 ಎಂದು ಗುರುತಿಸಲಾಗಿದೆ. ಸೋಂಕಿತರ ಜತೆ ನಿಕಟ ಸಂಪರ್ಕ ಹೊಂದಿದ್ದು ಅವರ ಮನೆಗೆ ಗಂಡ-ಹೆಂಡತಿ ಹೋಗಿಬರುತ್ತಿದ್ದು ಈ ವೇಳೆ ಸೋಂಕು ತಗಲಿರಬಹುದು. ಸೋಂಕಿತ ಗಂಡ-ಹೆಂಡತಿಯನ್ನು ಜಿಲ್ಲಾ ಕರೊನಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿರಿಸಲಾಗಿದೆ.

ಮಕ್ಕಳಿಬ್ಬರಿಗೆ ನೆಗಟಿವ್: ಸೋಂಕಿತ ಗಂಡ-ಹೆಂಡತಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅವರ ಗಂಟಲುಸ್ರಾವ, ರಕ್ತಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅವರ ವರದಿ ನೆಗಟಿವ್ ಬಂದಿದೆ. 'ಎ' ಮಾದರಿ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಪತ್ತೆ ಕಾರ್ಯ ಈಗ ಜಿಲ್ಲಾಡಳಿತಕ್ಕೆ ದೊಡ್ಡ ತಲೆಬಿಸಿ ತಂದಿದೆ.

ಕಿತ್ತಳೆ ವಲಯದಲ್ಲಿ ತುಮಕೂರು!: ತುಮಕೂರು ಜಿಲ್ಲೆ ಕರೊನಾಮುಕ್ತವಾಗಲಿದೆ ಎನಿಸಿದ್ದಾಗಲೇ 25 ದಿನಗಳ ಬಳಿಕ 3ನೇ ಪಾಸಿಟಿವ್ ಪ್ರಕರಣ ಪತ್ತೆಯಾಯಿತು. ಈ ಪ್ರಕರಣ ಪತ್ತೆ ಆಗಿ 8 ದಿನಗಳೊಳಗೆ 4 ಕರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಹಾಗಾಗಿ, ಜಿಲ್ಲೆಯು ಕಿತ್ತಳೆ ವಲಯಲ್ಲಿದ್ದು ಲಾಕ್‌ಡೌನ್ ಸಂದರ್ಭದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕಿದೆ. ಮಕ್ಕಳು, ಹಿರಿಯರು ಮನೆಯಿಂದ ಹೊರಬರಬಾರದು. ಅಲ್ಲದೆ, ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ, ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಸರ್ಕಾರದ ನಿರ್ದೇಶನಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮನವಿ ಮಾಡಿದ್ದಾರೆ.

ಕಂಟೈನ್ಮೆಂಟ್ ರೆನ್‌ನಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ: ಕರೊನಾ ಸೋಂಕಿತ ಮೂಲ ಕೇಂದ್ರ ಎನಿಸಿರುವ ಕೆಎಚ್‌ಬಿ ಕಾಲನಿ ಸೋಂಕಿತ ನಿವಾಸಿಗಳ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿ ಪ್ರದೇಶ ಕಂಟೈನ್ಮೆಂಟ್ ರೆನ್ ಆಗಿದ್ದು ಇನ್ನಷ್ಟು ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ. ಮನೆ, ಮನೆ ಆರೋಗ್ಯ ತಪಾಸಣೆ ತೀವ್ರಗೊಳಿಸಲಾಗಿದೆ. ಅಲ್ಲದೆ, 1 ಕಿ.ಮೀ., ಬಫರ್ ರೆನ್ ವ್ಯಾಪ್ತಿಯಲ್ಲೂ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ. 50 ವರ್ಷ ಮೇಲ್ಪಟ್ಟ ಪಾಲಿಕೆ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಈ ರೆನ್‌ನಲ್ಲಿ ಸೇವೆಯಿಂದ ಮುಕ್ತಿಗೊಳಿಸಲಾಗಿದೆ.

ಗುಬ್ಬಿ ಬಳಿ ಸೋಂಕಿತನ ಟೀ ಅಂಗಡಿ: ಗುಬ್ಬಿ ತಾಲೂಕು ಎಂಎಚ್ ಪಟ್ಟಣ ಪೆಟ್ರೋಲ್ ಬಂಕ್ ಬಳಿ ಕೆಎಚ್‌ಬಿ ಕಾಲನಿ ನಿವಾಸಿ 40 ವರ್ಷದ ಸೋಂಕಿತ ವ್ಯಕ್ತಿ (ಪಿ-591) ಟೀ ಅಂಗಡಿ ಇಟ್ಟುಕೊಂಡಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಬಾಗಿಲು ಬಂದ್ ಮಾಡಿದ್ದ ಎನ್ನಲಾಗಿದೆ. ಅಲ್ಲದೆ, ಈತನಲ್ಲಿ ಯಾವುದೇ ಕರೊನಾ ಸೋಂಕಿನ ಲಕ್ಷಣಗಳು ಇಲ್ಲದಿರುವುದು,ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಲಿದೆ. ಈತನ ಮಕ್ಕಳಲ್ಲಿ ಕರೊನಾ ನೆಗೆಟಿವ್ ಬಂದಿರುವುದು ಸಮಾಧಾನಕರ ಸಂಗತಿ.