ಹಿರೀಸಾವೆ ಗ್ರಾಮದಲ್ಲಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಕಾನ್ಸ್‌ಟೇಬಲ್ ವಾಣಿಶ್ರೀ ಮಾತನಾಡಿದರು. ಉಮಾ, ಮಂಜುನಾಥ್, ಮೌರ್ಯ, ವಿನೋದಮ್ಮ, ರೂಪಾ ಧರ್ಮೇಶ್, ವಿದ್ಯಾರ್ಥಿಗಳು ಹಾಜರಿದ್ದರು. 
ಜಿಲ್ಲೆ

ತಾಳ್ಮೆ ಹಾಗೂ ಸಹನೆಗೆ ಮತ್ತೊಂದು ಹೆಸರೇ ಹೆಣ್ಣು

 ಹಿರೀಸಾವೆ: ಕುಟುಂಬದ ನಿರ್ವಹಣೆ ಹಾಗೂ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದುದು ಎಂದು ಹಿರೀಸಾವೆ ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ವಾಣಿಶ್ರೀ ಅಭಿಪ್ರಾಯ ಪಟ್ಟಿದ್ದಾರೆ.

ಇಲ್ಲಿನ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ವಿಶ್ವ ಮಹಿಳಾ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಣ್ಣು ಎಂದಿಗೂ ಅಬಲೆಯಲ್ಲ, ಹೆಣ್ಣು ಎಂಬ ಪದ ಕೇಳಲು ಸರಳ ಎನಿಸಬಹುದು. ಆದರೆ ಅವಳಲ್ಲಿರುವ ಶಕ್ತಿ ಅಪಾರ. ಮನಸು ಮಾಡಿದರೆ ವಿಶ್ವವನ್ನೇ ಆಳಬಲ್ಲಳು. ತಾಳ್ಮೆ ಹಾಗೂ ಸಹನೆಗೆ ಮತ್ತೊಂದು ಹೆಸರೇ ಹೆಣ್ಣು. ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣು ಸಮಪಾಲು ಪಡೆದಿದ್ದಾಳೆ ಎಂದು ತಿಳಿಸಿದರು.

ಮನೆಯವರ ಒತ್ತಡ ಹಾಗೂ ಸಂಬಂಧಿಕರ ಒತ್ತಾಯಕ್ಕೆ ಮಣಿದು ಚಿಕ್ಕ ವಯಸ್ಸಿನಲ್ಲಿಯೇ ಅದೆಷ್ಟೋ ಹೆಣ್ಣು ಮಕ್ಕಳು ಮದುವೆಯಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚಿನ ಶಿಕ್ಷಣ ಪಡೆದು ಉದ್ಯೋಗ ಹೊಂದಿದ ಬಳಿಕ ಎಲ್ಲವೂ ತಾನಾಗಿಯೇ ಸಿಗಲಿದೆ ಎಂದು ಸಲಹೆ ನೀಡಿದರು.

ಇನ್ನು ಶೈಕ್ಷಣಿಕ ಹಂತದಲ್ಲಿ ಟಿವಿ, ಮೊಬೈಲ್ ಬಳಕೆಯಿಂದ ದೂರ ಇರುವುದು ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳಿಗೆ ಬಿದ್ದಿರುವ ಅದೆಷ್ಟೋ ಮಕ್ಕಳು ತಮ್ಮ ಬದುಕನ್ನು ಆಳು ಮಾಡಿಕೊಂಡಿದ್ದಾರೆ. ಆನ್‌ಲೈನ್ ಗೇಮ್ ಹಾಗೂ ಇತರೆ ಮಾರಕ ಆ್ಯಪ್‌ಗಳ ಮೂಲಕ ಸಮಸ್ಯೆ ತಂದೊಡ್ಡಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇದರಿಂದ ನಿಮ್ಮ ಜೀವ, ಜೀವನ ಹಾಗೂ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.

ಮನೆಯಿಂದ ಶಾಲೆಗೆ ಆಗಮಿಸುವ ಹಾಗೂ ಹಿಂದಿರುಗುವ ವೇಳೆಯಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಸಂಚರಿಸಬೇಕು. ರಸ್ತೆ ದಾಟುವಾಗ ಎರಡೂ ಕಡೆ ನೋಡಿ ವಾಹನಗಳು ಬಾರದಿರುವುದನ್ನು ಗಮನಿಸಿ ಖಾತ್ರಿ ಪಡಿಸಿಕೊಂಡು ಮುಂದೆ ಸಾಗಬೇಕು. ಸಂಚಾರ ನಿಯಮಗಳನ್ನು ಪಾಲಿಸುವುದರಿಂದ ಅಪಘಾತಗಳನ್ನು ಸುಲಭದಿಂದ ತಪ್ಪಿಸಬಹುದು ಎಂದು ಮಾಹಿತಿ ನೀಡಿದರು.

ಮುಖ್ಯಶಿಕ್ಷಕಿ ಉಮಾ, ಎಸ್‌ಡಿಎಸ್‌ಸಿ ಅಧ್ಯಕ್ಷ ಮಂಜುನಾಥ್, ಮೌರ್ಯ, ಪೊಲೀಸ್ ಸಿಬ್ಬಂದಿಗಳಾದ ವಿನೋದಮ್ಮ, ರೂಪ ಧರ್ಮೇಶ್, ಸಹಶಿಕ್ಷಕ ಹೆಚ್.ಬಿ.ದೇವರಾಜ್, ಎಲ್.ಎಸ್.ಧರ್ಮೇಶ್, ದೇವಕಿ, ಎನ್.ಜಿ.ಶೋಭಾ, ವಿನಯ ಎಂ. ಗು ನಗ ಎಂ.ಬಿ.ಗೌರಮ್ಮ, ಆರ್.ಶೋಭಾ, ವರಲಕ್ಷ್ಮೀ ವಿದ್ಯಾರ್ಥಿಗಳು ಹಾಜರಿದ್ದರು.