ನೆಲಮಂಗಲದ ಪ್ರವಾಸಿ ಮಂದಿರದ ಬಳಿಯ ಇಂದಿರಾ ಕ್ಯಾಂಟೀನ್‌ಗೆ ಶನಿವಾರ ಶಾಸಕ ಎನ್.ಶ್ರೀನಿವಾಸ್ ಊಟ ಸವಿದರು. ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ, ನಗರಸಭೆ ಪೌರಾಯುಕ್ತ ಎಚ್.ಎಂ.ಮನುಕುಮಾರ್ ಇತರರು ಇದ್ದರು. 
ಜಿಲ್ಲೆ

ಮತ್ತೊಂದು ಇಂದಿರಾ ಕ್ಯಾಂಟೀನ್

ಬೆಂಗಳೂರು ಗ್ರಾಮಾಂತರ ಡೆಸ್ಕ್

ಶಾಸಕ ಶ್ರೀನಿವಾಸ್ ಮಾಹಿತಿ-ನೆಲಮಂಗಲ ತಾಲೂಕು ಕಚೇರಿ ಸಮೀಪ ಶೀಘ್ರ ಆರಂಭ

ನೆಲಮಂಗಲ: ನಗರದ ಪ್ರವಾಸಿ ಮಂದಿರದ ಬಳಿಯ ಇಂದಿರಾ ಕ್ಯಾಂಟಿನ್‌ಗೆ ಶಾಸಕ ಎನ್.ಶ್ರೀನಿವಾಸ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ ಎಂ.ಜಿ.ರಸ್ತೆ ಅಭಿವೃದ್ಧಿ ಹಿನ್ನೆಲೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ವೇಳೆ ನಗರದ ಮುಖ್ಯ ರಸ್ತೆಯಲ್ಲಿನ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ, ಅಡುಗೆ ಮನೆ ಹಾಗೂ ಸಾರ್ವಜನಿಕರು ಊಟ ಮಾಡುವ ಪ್ರದೇಶ ಪರಿಶೀಲಿಸಿದರು. ನಿತ್ಯ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಅವಧಿಯಲ್ಲಿ ಬರುವ ಸಾರ್ವಜನಿಕರ ಕುರಿತಂತೆ ಮಾಹಿತಿ ಸಂಗ್ರಹಿಸಿದರು.

ತಾಲೂಕು ಕೇಂದ್ರ ಸ್ಥಾನವಾಗಿರುವ ನಗರ ತಾಲೂಕು ಕಚೇರಿ, ಸಾರ್ವಜನಿಕ ಆಸ್ಪತ್ರೆ ಸೇರಿ ಇನ್ನಿತರ ಕೆಲಸಗಳಿಗಾಗಿ ದೂರದ ಗ್ರಾಮೀಣ ಪ್ರದೇಶದಿಂದ ಬರುವ ರೈತರು, ಸಾರ್ವಜನಿಕರ ಸ್ಥಿತಿ ಮನಗಂಡಿದ್ದು, ತಾಲೂಕು ಕಚೇರಿ ಬಳಿಯ ಉದ್ಯಾನವನದ ಜಾಗದಲ್ಲಿ ಮತ್ತೊಂದು ಇಂದಿರಾ ಕ್ಯಾಂಟೀನ್ ತೆರೆಯವುದಾಗಿ ಎನ್.ಶ್ರೀನಿವಾಸ್ ತಿಳಿಸಿದರು.

ನಗರಸಭೆ ಸದಸ್ಯರಾದ ದಾಕ್ಷಾಯಿಣಿ ರವಿಕುಮಾರ್, ಲತಾ ಹೇಮಂತಕುಮಾರ್, ಗಂಗಾಧರ್ ರಾವ್, ನರಸಿಂಹಮೂರ್ತಿ, ಸಿ.ಪ್ರದೀಪ್, ಎನ್.ಗಣೇಶ್, ಆನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಮುಖಂಡ ಮಿಲ್ಟ್ರೀಮೂರ್ತಿ, ಎಂ.ಕೆ.ನಾಗರಾಜು, ಕೆಂಪರಾಜು, ಕೆ.ಕೆ.ಕೃಷ್ಣಪ್ಪ, ಲಕ್ಷ್ಮೀನಾರಾಯಣ್, ಮುನಿರಾಜು, ಸಿಎಂ.ಗೌಡ, ನಾರಾಯಣಗೌಡ, ನಾಗರತ್ನಮ್ಮ ಇತರರು ಇದ್ದರು.

ಊಟ ಸವಿದ ಶಾಸಕ: ಸಾರ್ವಜನಿಕರಿಂದ ಊಟದ ರುಚಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ ಶಾಸಕರು, ಕ್ಯಾಂಟೀನ್‌ನಲ್ಲಿ ತಯಾರಿಸಿದ್ದ ಊಟ ಸವಿದು ಪರೀಕ್ಷೆ ಮಾಡಿದರು. ಅವಶ್ಯವಿರುವ ಸಾಂಬಾರು ಪುಡಿಯ ಜತೆಗೆ ತರಕಾರಿ ಬಳಸಿ ಶುಚಿರುಚಿಯಾದ ಅಡುಗೆ ಮಾಡಿ ಬಡಿಸುವಂತೆ ಸಿಬ್ಬಂದಿಗೆ ಸಲಹೆ ನೀಡಿದರು. ಆಗಿಂದಾಗ್ಗೆ ಕ್ಯಾಂಟೀನ್‌ಗೆ ಭೇಟಿ ನೀಡಿ ನಿರ್ವಹಣೆ ಬಗ್ಗೆ ಪರಿಶೀಲನೆ ಮಾಡುವಂತೆ ಪೌರಾಯುಕ್ತರಿಗೆ ತಿಳಿಸಿದರು.