ಜಿಲ್ಲೆ

ಗದಗ ನಗರಸಭೆಯಲ್ಲಿ ಮತ್ತೊಂದು ಅಕ್ರಮ ಬಯಲು

ವೀರೇಶ ಸೌದ್ರಿ

ಶಿವಾನಂದ ಹಿರೇಮಠ ಗದಗ
ಗದಗ ನಗರಸಭೆಯಲ್ಲಿ ಮತ್ತೊಂದು ಅಕ್ರಮ ಬೆಳಕಿಗೆ ಬಂದಿದೆ. ಅಭಿವೃದ್ಧಿಗೊಳ್ಳದ ನಗರದ 1063 ನಿವೇಶನಗಳಿಗೆ ಹಕ್ಕು ಬದಲಾವಣೆಯ ನಮೂನೆ-3 ವಿತರಣೆ ಪ್ರಕರಣ ಚರ್ಚೆಯಲ್ಲಿದ್ದು, ಜಿಲ್ಲಾಡಳಿತವು ನಗರಸಭೆ ಕಂದಾಯ ಅಧಿಕಾರಿಯೊಬ್ಬರನ್ನು ಅಮಾನತು ಮಾಡಿದೆ.

ನಗರಸಭೆಯಲ್ಲಿನ ‘ಆನೆ’ ಬಿಟ್ಟು, ಜಿಲ್ಲಾಡಳಿತ ‘ಕುರಿ’ ಹೊಡೆದಿದೆ. ಪ್ರಕರಣದ ಹಿಂದೆ ದೊಡ್ಡ ಜಾಲವಿದ್ದು, ಸದ್ದಿಲ್ಲದೆ ತೆರೆಮರೆಗೆ ಸರಿಸುವ ಹುನ್ನಾರ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಏನಿದು ಪ್ರಕರಣ?

2023ರ ಏಪ್ರಿಲ್ 1ರಿಂದ ಜು.13ರವರೆಗೆ ನಗರಸಭೆಯಿಂದ ಒಟ್ಟು 3148 ನಿವೇಶನಗಳಿಗೆ ನಮೂನೆ-3 ವಿತರಿಸಲಾಗಿದೆ. ಅದರಲ್ಲಿ ಗದಗ ನಗರ ವ್ಯಾಪ್ತಿಯ ಸರ್ವೇ.ನಂ 862(22.14 ಎಕರೆ), ಸರ್ವೇ ನಂ 863(23.16 ಎಕರೆ), ಸರ್ವೇ ನಂ 864(20.11 ಎಕರೆ) ಪ್ರದೇಶದಲ್ಲಿ ಲೇಔಟ್ ಅಭಿವೃದ್ಧಿ ಹಂತದಲ್ಲಿವೆ. ಪೂರ್ಣ ಪ್ರಮಾಣದ ಅಭಿವೃದ್ಧಿ ಹೊಂದಿರದ ಕಾರಣ ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ದೊರೆತಿಲ್ಲ. ಪ್ರಾಧಿಕಾರದ ನಿರಾಕ್ಷೇಪಣಾ ಪತ್ರ ಇಲ್ಲದಿದ್ದರೂ 1063 ನಿವೇಶನಗಳಿಗೆ ನಮೂನೆ-3 ವಿತರಿಸಲಾಗಿದೆ.

ಅಕ್ರಮ ನಡೆದಿದೆ ಎಂದು ನಗರಸಭೆ ಸದಸ್ಯರಾದ ಲಕ್ಷ್ಮಿ ಸಿದ್ದನಹಳ್ಳಿ, ಬರಕತ್ ಅಲಿ ಮುಲ್ಲಾ ಅವರು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನ್ನವರ ಅವರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಂತರ ಕಂದಾಯ ಅಧಿಕಾರಿ ಮಹೇಶ ಹಡಪದ ಅವರ ಮೇಲೆ ವಿಚಾರಣೆ ಬಾಕಿ ಇಟ್ಟು ನಾಗರಿಕ ಸೇವಾ ನಿಯಮ 1957/10ರ ಅನ್ವಯ ಅಮಾನತು ಮಾಡಲಾಗಿದೆ.

ಪ್ರಮುಖರ ರಕ್ಷಣೆ?

ಅಕ್ರಮವಾಗಿ ನಮೂನೆ 3 ಹಕ್ಕುಪತ್ರ ವಿತರಿಸಿದ ಪ್ರಕರಣದ ಹಿಂದೆ ನಗರಸಭೆಯ ಪ್ರಮುಖ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ನಗರಸಭೆ ಅಧಿಕಾರಿಗಳ ಅನುಮತಿ ಇಲ್ಲದೆ ಇಂತಹ ಹಗರಣ ನಡೆಯಲು ಸಾಧ್ಯವಿಲ್ಲ ಎಂಬುದು ಸತ್ಯ. ಆದರೆ, ಕೇವಲ ಒಬ್ಬ ಅಧಿಕಾರಿಯನ್ನು ಅಮಾನತು ಮಾಡಿ ಪ್ರಮುಖ ತಪ್ಪಿತಸ್ಥರನ್ನು ಕೈಬಿಟ್ಟಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಪ್ರಾಧಿಕಾರದ ಅನುಮತಿ ಇಲ್ಲದೆ ನಡೆದ ಈ ಅಕ್ರಮದಿಂದ ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಆದಾಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಈ ಅಕ್ರಮವನ್ನು ಪೊಲೀಸ್ ತನಿಖೆಗೆ ಒಳಪಡಿಸಲು ನಗರಸಭೆ ಮುಂದಾಗಿದೆ.

ಅಭಿವೃದ್ಧಿಗೊಳಿಸದೇ ನಿವೇಶನ ಮಾರಾಟ ಮಾಡುವುದರಿಂದ, ನಿವೇಶನ ಖರೀದಿಸಿದ ಜನರು ರಸ್ತೆ, ಚರಂಡಿ ಹಾಗೂ ಮೂಲಸೌಕರ್ಯಗಳಿಂದ ವಂಚಿತರಾಗುತ್ತಾರೆ. ಹಾಗಾಗಿ, ಇದು ಕ್ರಿಮಿನಲ್ ಪ್ರಕರಣ ಆಗಿದೆ. ಜನಪ್ರತಿನಿಧಿಗಳ ಗಮನಕ್ಕೆ ಬಾರದೆ ಈ ಅವ್ಯವಹಾರ ನಡೆದಿದೆ. ಈ ಕುರಿತು ಎಫ್‌ಐಆರ್ ದಾಖಲಿಸಲಾಗುವುದು. ಪ್ರಕರಣದಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಕಠೀಣ ಕ್ರಮ ಕೈಗೊಳ್ಳಲು ನಗರಸಭೆ ಹಿಂದಡಿ ಇಡುವುದಿಲ್ಲ. ಉಷಾ ದಾಸರ, ನಗರಸಭೆ ಅಧ್ಯಕ್ಷೆ