ಜಿಲ್ಲೆ

ಸಿಎಂ ವಿರುದ್ಧ ಸ್ನೇಹಮಯಿ ಮತ್ತೊಂದು ದೂರು : ಸಮಗ್ರಹ ತನಿಖೆ ಕೈಗೊಳ್ಳಲು ಆಗ್ರಹ

ಅವಿನಾಶ್ ಜೈನಹಳ್ಳಿ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಅಕ್ರಮ ನಿವೇಶನ ಹಂಚಿಕೆ ಪ್ರಕರಣದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮತ್ತೊಂದು ಅಕ್ರಮದ ಆರೋಪ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ತಮ್ಮ ಕುಟುಂಬದವರ ಹೆಸರಿನಲ್ಲಿ ಬೇನಾಮಿಯಾಗಿ ಅಕ್ರಮ ಭೂ ವ್ಯವಹಾರ ಮಾಡಿದ್ದು, ಅವರ ವಿರುದ್ಧ ತನಿಖೆ ಕೈಗೊಳ್ಳಬೇಕು ಎಂದು ಸೋಮವಾರ ನಗರದ ಲೋಕಾಯುಕ್ತ ಎಸ್‌ಪಿ ಕಚೇರಿಗೆ ದೂರು ದಾಖಲಿಸಿದ್ದಾರೆ.

ಏನಿದು ಆರೋಪ?

ಮೈಸೂರು ತಾಲೂಕಿನ ಆಲನಹಳ್ಳಿ ಗ್ರಾಮದ ಸ.ನಂ.113/4ರಲ್ಲಿ 1 ಎಕರೆ ಭೂಮಿಯನ್ನು ಸಿದ್ದರಾಮಯ್ಯ ಅವರ ಬಾಮೈದ ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿ ಅವರು 1983ರ ಡಿ.15 ರಂದು ಆಲನಹಳ್ಳಿಯ ಹನುಮೇಗೌಡ, ಹನುಮಯ್ಯ, ಕರಿಯಪ್ಪ ಹಾಗೂ ಕೆಂಪಮ್ಮ ಅವರಿಂದ ಖರೀದಿಸಿದ್ದರು.

1996ರಲ್ಲಿ ಇದೇ ಜಮೀನನ್ನು ಮುಡಾ ಭೂಸ್ವಾಧೀನ ಪಡಿಸಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಆದರೆ 2006ರಲ್ಲಿ ಈ ಜಮೀನಿಗೆ ಮಲ್ಲಿಕಾರ್ಜುನ ಸ್ವಾಮಿ ಹೆಸರಿನಲ್ಲಿ ಅನ್ಯಕ್ರಾಂತ ಆದೇಶ ಹೊರಡಿಸಲಾಗಿದೆ. ಅದೇ ಭೂಮಿಯನ್ನು ಅವರು 2010 ಅಕ್ಟೋಬರ್ 20ರಂದು ತಮ್ಮ ಸಹೋದರಿ, ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ದಾನಪತ್ರವಾಗಿ ನೋಂದಣಿ ಮಾಡಿದ್ದಾರೆ. 2010ರ ನವೆಂಬರ್ 11ರಂದು ಪಾರ್ವತಿ ಅವರು ತಮ್ಮ ಪುತ್ರ ಯತೀಂದ್ರ ಅವರಿಗೆ ದಾನವಾಗಿ ಕೊಟ್ಟಿದ್ದಾರೆ. 2011ರ ಮಾರ್ಚ್ 23ರಂದು ಯತೀಂದ್ರ ಬೇರೊಬ್ಬರಿಗೆ ಭೂಮಿ ಮಾರಾಟ ಮಾಡಿದ್ದಾರೆ. ಆದರೆ ಈಗಲೂ ಆರ್‌ಟಿಸಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ಹೆಸರಿನಲ್ಲೇ ಕೃಷಿ ಭೂಮಿ ಎಂದು ಮುಂದುವರಿದಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

1996ರಲ್ಲೇ ಅಂತಿಮ ಅಧಿಸೂಚನೆ ಹೊರಡಿಸಿದ್ದರೂ ಯಾವ ಕಾರಣದಿಂದ ಈ ಜಮೀನನ್ನು ಭೂಸ್ವಾಧೀನದಿಂದ ಕೈಬಿಡಲಾಯಿತು? ಇದಕ್ಕೆ ಪ್ರಭಾವ ಬೀರಿದ್ದು ಯಾರು? ಕೆಸರೆ ಗ್ರಾಮದ ಜಮೀನಿನ ದಾನಪತ್ರದ ಕುರಿತು ಹೇಳುವಾಗ ಈ ವಿಚಾರವನ್ನು ಮುಚ್ಚಿಟ್ಟಿದ್ದು ಏಕೆ? ಮಲ್ಲಿಕಾರ್ಜುನ ಸ್ವಾಮಿ ಅವರು ಈವರೆಗೆ ಈ ರೀತಿ ಎಷ್ಟು ಜಮೀನನ್ನು ಖರೀದಿ ಮಾಡಿ ಪಾರ್ವತಿ ಅವರ ಹೆಸರಿಗೆ ವರ್ಗಾಯಿಸಿದ್ದಾರೆ? ಎಂಬ ಅಂಶಗಳ ಕುರಿತು ತನಿಖೆ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಕೋರಿದ್ದಾರೆ.

ಕಾನೂನು ಹೋರಾಟ ನಿಲ್ಲದು

ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ಸಿಎಂ ಸಿದ್ದರಾಮಯ್ಯ ಅವರು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ. ಈಗಾಗಲೇ ಇವರು ಕೆಸರೆ ಗ್ರಾಮದ 3.16 ಗುಂಟೆ ಜಾಗವನ್ನು ಅರಿಶಿಣ ಕುಂಕುಮ ರೂಪದಲ್ಲಿ ಕೊಟ್ಟಿದ್ದಾರೆ ಎಂದಿದ್ದರು. ಈಗ ಮತ್ತೆ ಮಲ್ಲಿಕಾರ್ಜುನಸ್ವಾಮಿ ಒಂದು ಎಕರೆ ದಾನ ಮಾಡಿದ್ದಾರೆ. ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿದ ಭೂಮಿಗಳನ್ನೇ ಏಕೆ ದಾನ ಮಾಡ್ತಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಎಲ್ಲಿಯೂ ಹೇಳಿಲ್ಲ ಏಕೆ? ಮೊದಲು ಪಾರ್ವತಿಯವರ ಕುಟುಂಬದ ಆಸ್ತಿ ಎಷ್ಟು ಎಂಬುದನ್ನು ಪತ್ತೆ ಮಾಡಬೇಕು. ಮಲ್ಲಿಕಾರ್ಜುನಸ್ವಾಮಿ ಎಷ್ಟು ಆಸ್ತಿ ಖರೀದಿಸಿದ್ದಾರೆ ಎಂಬುದನ್ನು ತನಿಖೆ ಮಾಡಬೇಕು. ಈ ಪ್ರಕಾರಣದಲ್ಲೂ 1983ರಲ್ಲಿ ಆಲನಹಳ್ಳಿ ಸರ್ವೇ ನಂಬರ್ 113/4 ರಲ್ಲಿ ಒಂದು ಎಕರೆ ಭೂಮಿ ಖರೀದಿಸಿದ್ದಾರೆ. 1996ರಲ್ಲಿ ಮುಡಾ ಅಂತಿಮ ಅದಿಸೂಚನೆ ಹೊರಡಿಸಿದ್ದರೂ ಡಿ ನೋಟಿಫೈ ಮಾಡಿಸಲಾಗಿದೆ. ಸಿದ್ದರಾಮಯ್ಯ ಪ್ರಭಾವ ಬೀರಿ ಡಿ ನೋಟಿಫೈ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಅದೇ ಭೂಮಿಯನ್ನು 2010ರ ಅಕ್ಟೊಬರ್ ನಲ್ಲಿ ಪಾರ್ವತಿಗೆ ದಾನ ಮಾಡಲಾಗಿದೆ. ಪಾರ್ವತಿ ಸಿದ್ದರಾಮಯ್ಯ ಅವರು ಕೂಡ ಒಂದೇ ತಿಂಗಳಲ್ಲಿ ಮಗನ ಹೆಸರಿಗೆ ದಾನ ಮಾಡಿದ್ದಾರೆ. ತಮ್ಮ ಹೆಸರಿಗೆ ಬಂದ ಭೂಮಿಯನ್ನು ಯತೀಂದ್ರ ನಾಲ್ಕೇ ತಿಂಗಳಲ್ಲಿ ಬೇರೆಯವರಿಗೆ ಮಾರಾಟ ಮಾಡಿರುವುದು ಗೊತ್ತಾಗಿದೆ. ಈ ಎಲ್ಲ ವಿಚಾರಗಳನ್ನು ಇಲ್ಲಿಯವರೆಗೆ ಸಿದ್ದರಾಮಯ್ಯ ಏಕೆ ತಿಳಿಸಿಲ್ಲ? ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನಸ್ವಾಮಿ ಹೆಸರಿನಲ್ಲಿ ಬೇನಾಮಿ ಆಸ್ತಿ ಸಂಪಾದನೆ ಮಾಡಿರುವ ಅನುಮಾನ ಇದೆ. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ಅಧಿಕಾರಿಗಳು ವಿಳಂಬ ನೀತಿ ತೋರಿಸಿದರೆ ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದು ತಿಳಿಸಿದರು.