ಜಿಲ್ಲೆ

ಕಿಂಗ್​ಪಿನ್​ ಭರತ್​ನ ಮತ್ತೊಂದು ವಂಚನೆ ಬಯಲು

ಕೋಲಾರ ಡೆಸ್ಕ್

ಗಾರ್ಮೆಂಟ್​ ಹೆಸರಲ್ಲಿ ಕಾರ್ಮಿಕರಿಗೆ ವೇತನ ನೀಡದೆ ಪರಾರಿ

ಬಂಗಾರಪೇಟೆ: ಪಟಾಕಿ ಚೀಟಿ ಹೆಸರಿನಲ್ಲಿ ಬಡಬಗ್ಗರಿಗೆ ಸುಮಾರು 12 ಕೋಟಿ ರೂ. ಪಂಗನಾಮ ಹಾಕಿ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿರುವ ಕಿಂಗ್​ಪಿನ್​ ಭರತ್​ನ ಮತ್ತೊಂದು ವಂಚನೆ ಪ್ರಕರಣ ಬಯಲಿಗೆ ಬಂದಿದೆ.

ಪಟ್ಟಣದ ಕೆಜಿಎಫ್​ ರಸ್ತೆಯಲ್ಲಿರುವ ಜಿ.ಆರ್​.ಮಾರ್ಕೆಟ್​ ಕಟ್ಟಡದಲ್ಲಿ ಭರತ್​ ಎಕ್ಸ್​ಪರ್ಟ್​ ಗಾರ್ಮೆಂಟ್ಸ್​ ತೆರೆದು ಬಟ್ಟೆ ವ್ಯವಹಾರ ನಡೆಸುತ್ತಿದ್ದು, ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ ಒಂದೂವರೆ ತಿಂಗಳಿಂದ ವೇತನ ನೀಡದೆ ಇರುವುದರಿಂದ ಹಾಗೂ ಗಾರ್ಮೆಂಟ್ಸ್​ಗೆ ಬೀಗ ಹಾಕಿದ್ದ ಹಿನ್ನೆಲೆಯಲ್ಲಿ ನೂರಾರು ಮಹಿಳಾ ಕಾರ್ಮಿಕರು ಪ್ರತಿಭಟನೆ ನಡೆಸಿದ್ದು, ವಂಚಕನ ಮತ್ತೊಂದು ಮುಖವಾಡ ಹೊರಬಿದ್ದಿದೆ.

ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 180ಕ್ಕೂ ಹೆಚ್ಚು ಕಾರ್ಮಿಕರಿಗೆ ವೇತನ ನೀಡದೆ ಲಕ್ಷಾಂತರ ಹಣ ವಂಚಿಸಿದ್ದಾನೆ ಎಂದು ಮಹಿಳಾ ಕಾರ್ಮಿಕರು ಆರೋಪಿಸಿದ್ದಾರೆ.

ಬಂಗಾರಪೇಟೆ ಗಾರ್ಮೆಂಟ್ಸ್​ನಲ್ಲಿ 180, ಕೆಜಿಎಫ್​ 80 ಮತ್ತು ವಿ.ಕೋಟ ಬಳಿಯ 40 ಮಂದಿ ಕಾರ್ಮಿಕರಿಗೆ ಕಳೆದ ಒಂದೂವರೆ ತಿಂಗಳಿಂದ ಕೂಲಿ ಹಣ ನೀಡಿಲ್ಲ ಎಂದು ಕಾರ್ಮಿಕರು ಆಪಾದಿಸಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆ ಬಾಕಿ ವೇತನ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಕಾರ್ಮಿಕರಿಗೆ ಈಗ ನಿರಾಸೆ ಉಂಟಾಗಿದೆ.

ದೀಪಾವಳಿಗೆ ಗಾರ್ಮೆಂಟ್ಸ್​ಗೆ ರಜೆ ನೀಡಲಾಗಿದ್ದು, ಗುರುವಾರ ಬೆಳಗ್ಗೆ ಕಾರ್ಮಿಕರು ಕೆಲಸಕ್ಕೆ ಆಗಮಿಸಿದ್ದಾಗ ಬೀಗ ಹಾಕಿರುವುದು ಕಂಡು ಬಂದಿದೆ. ಇದನ್ನು ಕಂಡು ಸ್ಥಳದಲ್ಲೇ ಪ್ರತಿಭಟನೆ ನಡೆಸಲಾಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ ದೂರು ನೀಡುವಂತೆ ತಿಳಿಸಿ, ವಂಚನೆಗೊಳಗಾದ ಕಾರ್ಮಿಕರನ್ನು ಸಮಾಧಾನ ಪಡಿಸಿದರು.

ಬಡವರೇ ಟಾರ್ಗೆಟ್​!

ಪಟಾಕಿ ಚೀಟಿ ಸದಸ್ಯರು ಮತ್ತು ಗಾರ್ಮೆಂಟ್​ ಕಾರ್ಮಿಕರನ್ನು ವಂಚಿಸಿರುವುದನ್ನು ಗಮನಿಸಿದರೆ ಕಿಂಗ್​ ಪಿನ್​ ಭರತ್​ ಬಡವರನ್ನೇ ಟಾರ್ಗೆಟ್​ ಮಾಡಿರುವುಂತೆ ಕಾಣುತ್ತದೆ. ಅದರಲ್ಲೂ ಮಹಿಳೆಯರೇ ಹೆಚ್ಚಾಗಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಈಗಾಗಲೇ ಪಟಾಕಿ ಚೀಟಿ ವಂಚನೆಯಲ್ಲಿ ಕಿಂಗ್​ಪಿನ್​ ಭರತ್​ ಮತ್ತು ಆತನ ಸಹೋದರಿ ಅರ್ಚನಾ ವಿರುದ್ಧ ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಇದುವರೆವಿಗೂ ವಂಚಕರು ಎಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ. ಹಲವರ ಜತೆಯಲ್ಲಿ ಕಿಂಗ್​ಪಿನ್​ ಭರತ್​ ಸಂಪರ್ಕ ಮಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದಾನೆ ಎನ್ನಲಾಗಿದ್ದು, ಮೊಬೈಲ್​ ಟ್ರ್ಯಾಕ್​ ಮಾಡಿದರೆ ವಂಚಕರ ಸುಳಿವು ಪತ್ತೆ ಮಾಡಬಹುದಲ್ಲಾ ಅನ್ನೋದು ನೊಂದವರ ವಾದವಾಗಿದೆ.

ಕಾರ್ಮಿಕ ಇಲಾಖೆ ಅಧಿಕಾರಿ ಎಲ್ಲಿ?

ಭರತ್​ನ ಎಕ್ಸ್​ಫರ್ಟ್​ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿರುವ ನೂರಾರು ಕಾರ್ಮಿಕರಿಗೆ ವೇತನ ನೀಡದೆ ವಂಚಿಸಿದ್ದು, ಇದರ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲು ಕಾರ್ಮಿಕ ಇಲಾಖೆ ಅಧಿಕಾರಿಗಳು ಎಲ್ಲಿದ್ದಾರೆ? ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುವ ಕಾರ್ಮಿಕರ ಹೆಸರನ್ನು ಗಾರ್ಮೆಂಟ್ಸ್​ ಮಾಲೀಕರು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿರಬೇಕು. ಆದರೆ ಇಲ್ಲಿ ಯಾವೊಬ್ಬರನ್ನು ನೋಂದಾಯಿಸಿಲ್ಲ. ಕನಿಷ್ಠ ಕಾರ್ಮಿಕ ಇಲಾಖೆ ಅಧಿಕಾರಿಗಳು ಸಹ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.