ರಾಮನಗರ: ಜಿಲ್ಲೆಯಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದೆ. ತಮ್ಮ ಜಮೀನಿಗೆ ಕೆಲಸಕ್ಕೆ ತೆರಳುತ್ತಿದ್ದ ಸಹೋದರಿಯರಿಬ್ಬರ ಮೇಲೆ ಆನೆ ದಾಳಿ ನಡೆಸಿದ್ದು, ಓರ್ವ ಮಹಿಳೆ ಮೃತಪಟ್ಟು, ಮತ್ತೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕನಕಪುರ ತಾಲೂಕಿನ ಅಚ್ಚಲು ಗ್ರಾಮದ ಇಂದಿರಾನಗರ ಬಳಿ ಕಾಡಾನೆ ದಾಳಿ ನಡೆಸಿದ್ದು, ಜಯಮ್ಮ (50)ಮೃತಪಟ್ಟ ಮಹಿಳೆ, ಇವರ ಸಹೋದರಿ ವೆಂಕಟಲಕ್ಷ್ಮಮ್ಮ (45) ತೀವ್ರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೋಮವಾರ ಮುಂಜಾನೆ ಬೆಳಿಗ್ಗೆ 5 ಗಂಟೆ ಸುಮಾರಿಗೆ ಇಬ್ಬರೂ ಸಹೋದರಿಯರು ತಮ್ಮ ಜಮೀನಿಗೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಆನೆ ದಾಳಿ ನಡೆಸಿದ್ದು, ಜಯಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಸಹೋದರಿಯನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.
ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ನಡೆದ ಮೂರನೇ ಆನೆ ದಾಳಿ ಪ್ರಕರಣವಾಗಿದೆ. ಈಗಾಗಲೇ ಎರಡು ಆನೆಗಳನ್ನು ಸೆರೆ ಹಿಡಿಯಲಾಗಿದೆಯಾಗಿದ್ದರೂ ಮತ್ತೊಂದು ಘಟನೆ ನಡೆದಿರುವುದು ಆತಂಕವನ್ನು ಹೆಚ್ಚಿಸಿದೆ.