ತುಮಕೂರು: ಕರೊನಾ ಸೋಂಕಿಗೆ ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದೆ. ಅಸ್ತಮಾ ಹಾಗೂ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ತುಮಕೂರಿನ ಕೆಎಚ್‌ಬಿ ಕಾಲನಿ ನಿವಾಸಿ 74 ವರ್ಷದ ವೃದ್ಧ ಕಳೆದ ಭಾನುವಾರ ಮೃತಪಟ್ಟಿದ್ದು, ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಅಸ್ತಮಾ ಹಾಗೂ ಶ್ವಾಸಕೋಶ ಸೋಂಕು ತಗುಲಿ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 74 ವರ್ಷದ ವೃದ್ಧ ಏ.25 ರಂದು ಜಿಲ್ಲಾ ಕರೊನಾ ಆಸ್ಪತ್ರೆಗೆ ದಾಖಲಾಗಿದ್ದು, 26ರಂದು ಬೆಳಗ್ಗೆ ಕೊನೆಯುಸಿರೆಳೆದಿದ್ದರು. 25ರಂದು ಸಂಜೆ ಮೃತನ ಗಂಟಲು ಸ್ರಾವ ಹಾಗೂ ರಕ್ತಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಬುಧವಾರ ಪ್ರಯೋಗಾಲಯದ ವರದಿ ಬಂದಿದ್ದು ಕರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಟ್ರಾವೆಲ್ ಹಿಸ್ಟರಿ ಇಲ್ಲ!: ಮೃತ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಹೊರ ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ಹೋಗದೆ ಇರುವುದು ಈಗ ಜಿಲ್ಲಾಡಳಿತಕ್ಕೆ ತಲೆಬಿಸಿ ತಂದಿದೆ. ಹಾಗಾಗಿ, ಬೆಂಗಳೂರಿನ ಪ್ರಯೋಗಾಲಯದಲ್ಲಿ 2 ಬಾರಿ ಪರೀಕ್ಷೆ ನಡೆಸಿ ಸೋಂಕು ತಗುಲಿರುವುದನ್ನು ದೃಢಪಡಿಸಿಕೊಳ್ಳಲಾಗಿದೆ. ಮೃತ ವೃದ್ಧನ ಮನೆಯಲ್ಲಿದ್ದ ನಾಲ್ವರನ್ನು ಪ್ರತ್ಯೇಕವಾಗಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿರಿಸಲಾಗಿದೆ. ಹಾಗೂ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ 51 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು ಕ್ವಾರಂಟೈನ್‌ನಲ್ಲಿರಿಸಲಾಗಿದೆ.
ಕಂಟೈನ್ಮೆಂಟ್ ರೆನ್: ಕರೊನಾದಿಂದ ವೃದ್ಧ ಮೃತಪಟ್ಟ ಹಿನ್ನೆಲೆಯಲ್ಲಿ ಆತ ವಾಸವಿದ್ದ ಕೆಎಚ್‌ಬಿ ಕಾಲನಿಯನ್ನು ಸಂಪೂರ್ಣವಾಗಿ ಕಂಟೈನ್ಮೆಂಟ್ ರೆನ್ ಎಂದು ಘೋಷಿಸಲಾಗಿದೆ. ಅಲ್ಲಿನ 1 ಕಿ.ಮೀ., ಪ್ರದೇಶವನ್ನು ಬಫರ್ ರೆನ್ ಎಂದು ಪರಿಗಣಿಸಿ ಆ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.
ನಾಗವಲ್ಲಿಯಲ್ಲಿ ಅಂತ್ಯಸಂಸ್ಕಾರ: ಮೃತ ವೃದ್ಧನ ಅಂತ್ಯ ಸಂಸ್ಕಾರವನ್ನು ಮೃತದೇಹ ನಿರ್ವಹಣಾ (ಡೆತ್‌ಬಾಡಿ ಮ್ಯಾನೇಜ್ಮೆಂಟ್) ತಂಡದ ಸೂಚನೆಯಂತೆ ನಾಗವಲ್ಲಿಯ ತೋಟದಲ್ಲಿ ಮಾಡಲಾಗಿದೆ. ಶಂಕಿತ ರೋಗಿಯೆಂದು ಪರಿಗಣಿಸಿ 9 ಅಡಿ ಆಳದಲ್ಲಿ ಶೇ.10ಸೋಡಿಯಂ ಹೈಪರ್ ಕ್ಲೋರೈಡ್ ಹಾಕಿ ಹೂಳಲಾಗಿದೆ. ಅಂತ್ಯ ಸಂಸ್ಕಾರದ ವಿಧಿ-ವಿಧಾನವನ್ನು ಪೂರ್ಣಗೊಳಿಸಲು ಮೃತನ ಸಂಬಂಧಿಕರಿಬ್ಬರಿಗೆ ಅವಕಾಶ ನೀಡಲಾಗಿತ್ತು ಎನ್ನಲಾಗಿದೆ.
ರಾಜ್ಯದಲ್ಲೇ ಮೊದಲು : ಯಾವುದೇ ಟ್ರಾವೆಲ್ ಹಿಸ್ಟರಿ ಅಥವಾ ಸೋಂಕಿತರ ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕ ಹೊಂದಿಲ್ಲದ 74 ವರ್ಷದ ವೃದ್ಧನಿಗೆ ಸೋಂಕು ಹೇಗೆ ತಗುಲಿತು ಎಂಬುದು ಪ್ರಶ್ನೆಯಾಗಿದೆ ಎಂದು ಡಿಸಿ ತಿಳಿಸಿದ್ದಾರೆ. ಮಾ.12ರ ನಂತರ ಮೃತ ವೃದ್ಧ ತುಮಕೂರಿನಿಂದ ಹೊರಗಡೆ ಹೋಗುವುದಾಗಲಿ, ಮಸೀದಿಗಳಿಗೆ ಹೋಗುವುದಾಗಲಿ ಮಾಡಿಲ್ಲ. ಆದರೂ ವೈರಾಣು ಹೇಗೆ ಬಂತೆಂಬ ಪ್ರಶ್ನೆ ಎದ್ದಿದೆ.
ಕೆಎಚ್‌ಬಿ ಕಾಲನಿ ಸೀಲ್‌ಡೌನ್: ಸೋಂಕಿನಿಂದ ಮೃತಪಟ್ಟ 74 ವರ್ಷದ ವೃದ್ಧ ವಾಸಿಸುತ್ತಿದ್ದ ಕರ್ನಾಟಕ ಹೌಸಿಂಗ್ ಬೋರ್ಡ್ (ಕೆಎಚ್‌ಬಿ) ಕಾಲನಿಯನ್ನು ಬುಧವಾರ ಬೆಳಗ್ಗೆ ಸೀಲ್‌ಡೌನ್ ಮಾಡಲಾಗಿದೆ. ನಗರದ ಜೈಪುರದಲ್ಲಿ ತಿಲಕ್‌ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕೆಎಚ್‌ಬಿ ಕಾಲನಿ ಪಾಲಿಕೆಯ 8ನೇ ವಾರ್ಡ್ ವ್ಯಾಪ್ತಿಗೆ ಬರುತ್ತದೆ. ವೃದ್ಧನ ಮನೆಯನ್ನು ಕೇಂದ್ರವಾಗಿರಿಸಿಕೊಂಡು ಸುತ್ತಲಿನ 100 ಮೀಟರ್ ಪ್ರದೇಶವನ್ನು ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸೀಲ್‌ಡೌನ್ ಮಾಡಿದರು. ಪಾಲಿಕೆ ಆಯುಕ್ತ ಟಿ.ಭೂಬಾಲನ್, ಎಎಸ್ಪಿ ಟಿ.ಜೆ.ಉದೇಶ್, ನಗರ ಡಿವೈಎಸ್ಪಿ ತಿಪ್ಪೇಸ್ವಾಮಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮನೆಗಳ ಸಮೀಕ್ಷೆ: ತಿಲಕ್‌ಪಾರ್ಕ್ ಠಾಣೆಯಿಂದ ಸೀಲ್ಡೌನ್ ಆರಂಭವಾಗಲಿದ್ದು, ಕಂಟೈನ್ಮೆಂಟ್ ರೆನ್‌ನಲ್ಲಿ 180 ಮನೆಗಳಿವೆ. ಸುಮಾರು 850 ರಿಂದ 900 ಜನ ಇರಬಹುದೆಂದು ಅಂದಾಜಿಸಲಾಗಿದೆ. ಪ್ರತೀ ಮನೆ,ಮನೆಗೆ ತೆರಳಿ ಆರೋಗ್ಯ ಇಲಾಖೆ ಸಿಬ್ಬಂದಿ ಸಮೀಕ್ಷೆ ಮಾಡುತ್ತಿದ್ದಾರೆ.
ಮನೆಯಲ್ಲಿಯೇ ಪ್ರಾರ್ಥನೆ ಮಾಡಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಪವಿತ್ರ ರಂಜಾನ್ ಮಾಸದಲ್ಲಿ ಜಿಲ್ಲೆಯ ಮುಸ್ಲಿಮರು ಮನೆಯಲ್ಲಿಯೇ ಪ್ರಾರ್ಥನೆ ಮಾಡುವಂತೆ ಜಿಲ್ಲಾ ವಕ್ಫ್ ಅಧಿಕಾರಿ ಸಾದೀಖಾ ಪರ‌್ವೀನ್ ಮನವಿ ಮಾಡಿದ್ದಾರೆ. ಶುಕ್ರವಾರದ ಪ್ರಾರ್ಥನೆಯೂ ಒಳಗೊಂಡಂತೆ ದೈನಂದಿನ ಸಾಮೂಹಿಕ ಪ್ರಾರ್ಥನೆಯ ಜತೆಗೆ ತರಾವ್ಹಿ ನಮಾಜ್ ಅನ್ನು ಮಸೀದಿಗಳಲ್ಲಿ ನಿರ್ವಹಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ತಬ್ಲಿಘಿಗಳ ಮಾಹಿತಿ ನೀಡಿ : ತುಮಕೂರಿನ ಮಸೀದಿಗಳಲ್ಲಿ ತಂಗಿರುವ ಬೇರೆ ಜಿಲ್ಲೆ, ರಾಜ್ಯ ಹಾಗೂ ವಿದೇಶಿಗರ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ಸಲ್ಲಿಸಿರುವ ಈ ಪಟ್ಟಿ ಹೊರತುಪಡಿಸಿ ಬೇರೆ ಯಾರಾದರೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೆ ಮಸೀದಿಗಳಲ್ಲಿ ತಂಗಿದ್ದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಮಸೀದಿಗಳ ಮುಖ್ಯಸ್ಥರಿಗೆ ಜಿಲ್ಲಾ ವಕ್ಫ್ ಅಧಿಕಾರಿ ಸಾದೀಖಾ ಪರ‌್ವೀನ್ ನಿರ್ದೇಶಿಸಿದ್ದಾರೆ. ತುಮಕೂರಿನ ಮಸೀದಿಗಳಲ್ಲಿ ಜಮಾತ್ ಸದಸ್ಯರು ಅಡಗಿದ್ದಾರೆಂದು ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿರುವುದರಿಂದ ಮಸೀದಿಗಳಲ್ಲಿ ಯಾರಾದರೂ ತಂಗಿದ್ದಲ್ಲಿ ಕೂಡಲೇ ಜಿಲ್ಲಾಡಳಿತ, ಸ್ಥಳೀಯ ಠಾಣೆ ಅಥವಾ ವಕ್ಫ್ ಕಚೇರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಇಂದು ಲಾಕ್‌ಡೌನ್ ಸಡಿಲಕ್ಕೆ ನಿರ್ಧಾರ?: ಮೇ 3ರವರೆಗೆ ಲಾಕ್‌ಡೌನ್ ಮುಂದುವರಿಯಲಿದ್ದು, ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಗೊಳಿಸುವ ಬಗ್ಗೆ ಏ.30ರಂದು ಮಧ್ಯಾಹ್ನ 3.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಗ್ರೀನ್ ರೆನ್‌ನಲ್ಲಿರುವ ತಾಲೂಕುಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡುವ ಬಗ್ಗೆ ಹಾಗೂ ಕರೊನಾ ನಿಯಂತ್ರಣದ ಕುರಿತು ಗುರುವಾರದ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಆದರೆ, ತುಮಕೂರು ನಗರ, ಶಿರಾವನ್ನು ಕಂಟೈನ್ಮೆಂಟ್ ಪ್ರದೇಶವೆಂದು ಗುರುತಿಸಿರುವ ಸ್ಥಳಗಳಲ್ಲಿ ಮೇ 3ರವರೆಗೆ ಲಾಕ್‌ಡೌನ್ ಮುಂದುವರಿಯಲಿದೆ.
ಸೀಲ್‌ಡೌನ್ ಪ್ರದೇಶದಲ್ಲಿ ವೈದ್ಯಕೀಯ ತುರ್ತು ಸೇವೆ ಹೊರತುಪಡಿಸಿ, ಅನಗತ್ಯವಾಗಿ ಓಡಾಡಲು ಅವಕಾಶವಿರುವುದಿಲ್ಲ. ಇಲ್ಲಿ ಹೊರಗೆ, ಒಳಗೆ ಹೋಗುವ ಪ್ರವೇಶ ಒಂದೇ ಕಡೆ ಮಾಡಲಾಗಿದ್ದು, ಇನ್ಸಿಡೆಂಟ್ ಕಮಾಂಡರ್ ಅವರನ್ನು ನೇಮಕ ಮಾಡಲಾಗುತ್ತದೆ. ಲಾಕ್‌ಡೌನ್ ಮುಗಿಯುವವರೆಗೂ ನಗರದಲ್ಲಿ ಜನರು ಅನಗತ್ಯ ಓಡಾಡದೆ ಮನೆಯಲ್ಲಿದ್ದು ಸಹಕರಿಸಿ. ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ